ADVERTISEMENT

ಭತ್ತದ ಮೇಲೆ ಮಳೆಯ ಕಾರ್ಮೋಡ: ಕಟಾವು ಮುಂದೂಡಿಕೆ

ಜೊಯಿಡಾ: ಹವಾಮಾನ ವೈಪರೀತ್ಯದಿಂದ ಸಮಸ್ಯೆ

ಜ್ಞಾನೇಶ್ವರ ಜಿ.ದೇಸಾಯಿ
Published 28 ನವೆಂಬರ್ 2022, 15:51 IST
Last Updated 28 ನವೆಂಬರ್ 2022, 15:51 IST
ಜೊಯಿಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆಗಾಳಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ, ಕೊಯ್ಲು ಮಾಡಿ ಒಣಗಲು ಇಟ್ಟ ಭತ್ತಕ್ಕೆ ನೀರು ನುಗ್ಗಿದೆ
ಜೊಯಿಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆಗಾಳಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ, ಕೊಯ್ಲು ಮಾಡಿ ಒಣಗಲು ಇಟ್ಟ ಭತ್ತಕ್ಕೆ ನೀರು ನುಗ್ಗಿದೆ   

ಜೊಯಿಡಾ: ಒಂದು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ರಾತ್ರಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯು, ಭತ್ತ ಬೆಳೆದ ರೈತರ ನೆಮ್ಮದಿ ಕಸಿದುಕೊಳ್ಳುತ್ತಿದೆ. ಫಸಲು ಕೊಯ್ಲಿಗೆ ಬಂದಿದ್ದು ಬೆಳೆ ಕಳೆದುಕೊಳ್ಳುವ ಆತಂಕ ಆವರಿಸಿದೆ.

ಕಷ್ಟಪಟ್ಟು ಬೆಳೆದ ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ಕೆಲವು ರೈತರು ಕೊಯ್ಲು ಕಾರ್ಯವನ್ನು ಒಂದು ವಾರದಿಂದ ಮುಂದೂಡುತ್ತ ಬಂದಿದ್ದಾರೆ.

ತಾಲ್ಲೂಕಿನಲ್ಲಿ ಭತ್ತ ಸಾಂಪ್ರದಾಯಿಕ ಹಾಗೂ ಏಕಮಾತ್ರ ಬೆಳೆಯಾಗಿದೆ. ಬಹುತೇಕ ಭಾಗಗಳಲ್ಲಿ ಮಳೆ ಬಂದರೆ ಮಾತ್ರ ಬೆಳೆ ಎಂಬಂತಿದೆ. ಈ ಬಾರಿ ಒಂದು ತಿಂಗಳು ತಡವಾಗಿ ಮಳೆಗಾಲ ಪ್ರಾರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳೂ ತಡವಾಗಿ ಆರಂಭವಾಗಿದ್ದವು.

ADVERTISEMENT

ತಾಲ್ಲೂಕಿನಲ್ಲಿ ಕೆಲವು ಭಾಗಗಳಲ್ಲಿ ಕಳೆದ ಮಂಗಳವಾರವೇ ಮಳೆ ಆಗಿದೆ. ಜೊಯಿಡಾ, ನಾಗೋಡಾ, ಕಾರ್ಟೊಳಿ ಭಾಗಗಳಲ್ಲಿ ಶನಿವಾರ ರಾತ್ರಿ ಮಳೆಯಾಗಿದೆ. ಭಾನುವಾರ ರಾತ್ರಿ ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ. ಸೋಮವಾರ ದಿನಪೂರ್ತಿ ಮೋಡ ಕವಿದ ವಾತಾವರಣವಿತ್ತು.

ಮಳೆಗೆ ಭತ್ತದ ಕಾಳು ಕಪ್ಪಾಗುತ್ತದೆ. ಅಲ್ಲದೇ ಮೊಳಕೆಯೊಡೆಯುವ ಸಾಧ್ಯತೆಯಿದೆ. ಹುಲ್ಲು ಸಹ ಒಣಗದೆ ಕೊಳೆಯುವ ಆತಂಕವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಾನುವಾರಿಗೆ ಮೇವಿನ ಕೊರತೆಯ ಸಾಧ್ಯತೆಯೂ ಹೈನುಗಾರರನ್ನು ಕಾಡುತ್ತಿದೆ. ಮೇವು ಮಾರಾಟದಿಂದ ಒಂದಷ್ಟು ಆದಾಯ ಗಳಿಸುವ ಯೋಚನೆಯಲ್ಲಿದ್ದ ರೈತರನ್ನು ಮಳೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ಅನಿಶ್ಚಿತ ವಾತಾವರಣದೊಂದಿಗೆ ಕಾಡು ಪ್ರಾಣಿಗಳ ಹಾವಳಿಯೂ ಮಿತಿ ಮೀರುತ್ತಿದೆ. ಇವುಗಳ ನಡುವೆ ರೈತರು ಹರಸಾಹಸ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 4,500 ಹೆಕ್ಟೇರ್ ಮುಂಗಾರು ವಾಡಿಕೆ ಭತ್ತ ಬಿತ್ತನೆ ಕ್ಷೇತ್ರವಿದೆ.

ಹಲವೆಡೆ ಭತ್ತಕ್ಕೆ ರೋಗ ಕಾಣಿಸಿಕೊಂಡಿದೆ. ಅಪಾರ ಪ್ರಮಾಣದಲ್ಲಿ ಭತ್ತ ಜೊಳ್ಳು ಬಿದ್ದಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕೊಯ್ಲು ಆಗಿದೆ. ಆದರೆ, ಫಸಲನ್ನು ಒಣಗಿಸಲು ಬಿಸಿಲು ಇಲ್ಲದೇ ಸಮಸ್ಯೆಯಾಗಿದೆ. ಹಾಗಾಗಿ ತಾಲ್ಲೂಕಿನಲ್ಲಿ ಭತ್ತ ಬೇಸಾಯದ ಕ್ಷೇತ್ರವೂ ಕುಸಿಯುತ್ತಿದೆ. ರೈತರು ವಾಣಿಜ್ಯ ಬೆಳೆಗಳಾದ ಗೇರು, ಅಡಿಕೆ ಹಾಗೂ ದಾಲ್ಚಿನ್ನಿಗಳತ್ತ ಒಲುವ ತೋರುತ್ತಿದ್ದಾರೆ.

‘ನಾವು ಮಾರಾಟ ಮಾಡಿ ಲಾಭ ಗಳಿಸಬೇಕು ಎಂಬ ಉದ್ದೇಶದಿಂದ ಭತ್ತವನ್ನು ಬೆಳೆಯುವುದಿಲ್ಲ. ಮನೆ ಬಳಕೆಗೆ ಅಗತ್ಯವಾದಷ್ಟು ವ್ಯವಸಾಯ ಮಾಡುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಅಧಿಕ ನಷ್ಟವೇ ಆಗುತ್ತಿದೆ. ಮಳೆ ಹಾಗೂ ಇನ್ನಿತರ ಸಮಸ್ಯೆಗಳಿಂದ ತಾಲ್ಲೂಕಿನ ವಿವಿಧೆಡೆ ಭತ್ತ ಬೆಳೆಯುವುದನ್ನು ಬಿಟ್ಟಿದ್ದಾರೆ’ ಎಂದು ಜೊಯಿಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆಗಾಳಿಯ ರೈತ ಬಾಳಸು ಶೆಡ್ಡು ನಾಯ್ಕ ಆತಂಕ ವ್ಯಕ್ತಪಡಿಸುತ್ತಾರೆ.

‘ವಾತಾವರಣ ಗಮನಿಸಿ’:

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಪ್ರಕಾರ ಶೇ 33ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ರೈತರು ಮಳೆಯ ವಾತಾವರಣವನ್ನು ನೋಡಿ ಭತ್ತದ ಕಟಾವನ್ನು ಸ್ವಲ್ಪ ದಿನ ಮುಂದೂಡುವುದು ಸೂಕ್ತ. ಸಣ್ಣ ಪ್ರಮಾಣದ ಮಳೆಯು ಬೆಳೆಯನ್ನು ಹಾನಿ ಮಾಡುವುದಿಲ್ಲ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ.ಮಾನೆ ತಿಳಿಸಿದ್ದಾರೆ.

–––––

* ಎರಡು ಮೂರು ದಿನಗಳಲ್ಲಿ ಮಳೆ, ಮೋಡದ ವಾತಾವರಣ ಸರಿದು, ಹವಾಮಾನ ತಿಳಿಯಾಗದಿದ್ದರೆ ಭತ್ತದ ಬೆಳೆ ಸಂಪೂರ್ಣವಾಗಿ ಹಾನಿಗೀಡಾಗಬಹುದು.

– ಬಾಳಸು ಶೆಡ್ಡು ನಾಯ್ಕ, ಪಟ್ಟೆಗಾಳಿಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.