ADVERTISEMENT

ಗಾಳಿ ಮಳೆ: ಧರೆಗುರುಳುತ್ತಿರುವ ಮರ, ವಿದ್ಯುತ್‌ ಕಂಬ

ಕಚೇರಿ ಕಾರ್ಯಗಳಿಗೂ ತೊಡಕು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:35 IST
Last Updated 26 ಜುಲೈ 2024, 14:35 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡ -ಅಣಶಿ ಮಾರ್ಗದಲ್ಲಿ ಸದಾಶಿವಗಡ -ಔರಾದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಮರ ಬಿದ್ದು ವಿದ್ಯುತ್ ಕಂಬ ಮುರಿದಿರುವುದು
ಜೊಯಿಡಾ ತಾಲ್ಲೂಕಿನ ಕುಂಬಾರವಾಡ -ಅಣಶಿ ಮಾರ್ಗದಲ್ಲಿ ಸದಾಶಿವಗಡ -ಔರಾದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಮರ ಬಿದ್ದು ವಿದ್ಯುತ್ ಕಂಬ ಮುರಿದಿರುವುದು   

ಜೊಯಿಡಾ: ತಾಲ್ಲೂಕಿನಲ್ಲಿ ವೇಗವಾಗಿ ಗಾಳಿ ಬೀಸುತ್ತಿದ್ದು, ಸಾಲು ಸಾಲಾಗಿ ಮರಗಳು ರಸ್ತೆಯಲ್ಲಿ ಬೀಳುತ್ತಿವೆ. ಇದರಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಮೂರು ದಿನಗಳಿಂದ ವಿದ್ಯುತ್ ಇಲ್ಲದೇ ಜೊಯಿಡಾ ತಾಲ್ಲೂಕಿನ ಜನತೆ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಮಳೆ ಗಾಳಿಯಿಂದಾದ ಹಾನಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲು ಹಾಗೂ ಅಧಿಕಾರಿಗಳು ಮಾಹಿತಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಬಹುತೇಕ ಎಲ್ಲ ಕಚೇರಿಗಳಲ್ಲಿ ಬ್ಯಾಟರಿ ಚಾಲಿತ ವಿದ್ಯುತ್ ಸಹ ಮುಗಿದಿದ್ದು ನಿತ್ಯದ ಕಚೇರಿ ಕಾರ್ಯಗಳನ್ನು ಮಾಡಲು ಅಧಿಕಾರಿ ಸಿಬ್ಬಂದಿ ಪರದಾಡಿದರು. ವಿದ್ಯುತ್ ಸಮಸ್ಯೆ ಇರುವುದರಿಂದ ಸಾರ್ವಜನಿಕರು ಸಹ ಕಚೇರಿಗಳತ್ತ ಸುಳಿಯಲಿಲ್ಲ.

ಶುಕ್ರವಾರ ಬೆಳಿಗ್ಗೆ ಜೊಯಿಡಾ ಶಿವಾಜಿ ವೃತ್ತದಲ್ಲಿ ಅಗ್ನಿಶಾಮಕ ಠಾಣೆಯ ಎದುರು ರಸ್ತೆಯಲ್ಲಿ ಬೃಹತ್ ಮರ ಬಿದ್ದು ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಅದನ್ನು ತೆರೆವುಗೊಳಿಸುತ್ತಿದ್ದಂತೆ ದುರ್ಗಾದೇವಿ ದೇವಸ್ಥಾನ ಬಳಿ ಪೊಲೀಸ್ ಇಲಾಖೆ ಸಿಬ್ಬಂದಿ ವಸತಿ ಗೃಹದ ಎದುರು ರಸ್ತೆಯಲ್ಲಿ ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಯಿತು. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ಹೆಸ್ಕಾಂ ಸಿಬ್ಬಂದಿ ಮರದ ಕೊಂಬೆಗಳನ್ನು ತೆಗೆದು ಕಂಬಗಳನ್ನು ಹಾಕಿ ವಿದ್ಯುತ್ ಮಾರ್ಗವನ್ನು ದುರಸ್ತಿ ಗೊಳಿಸಿದರು. ಆದರೆ ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸುವ ಕಾರ್ಯ ಸಂಜೆಯವರೆಗೆ ಆರಂಭವಾಗಿರಲಿಲ್ಲ.

ADVERTISEMENT

ಶುಕ್ರವಾರ ಬೆಳಿಗ್ಗೆ ಕುಂಬಾರವಾಡ -ಉಳವಿ ರಸ್ತೆಯಲ್ಲಿ ಕಾಳಸಾಯಿ ಬಳಿ ಬಿದ್ದ ಮರವನ್ನು ತೆರವುಗೊಳಿಸಲು ನಿಂತಿದ್ದ ಉಳವಿ ಪಾಟ್ನೆಯ ಗುರುದಾಸ ಕಾಡೋಪೋಡಕರ ಅವರ ಜೀಪ್ ಮೇಲೆ ಇನ್ನೊಂದು ಮರ ಬಿದ್ದು ಹಾನಿಯಾಗಿದೆ.

ಜೊಯಿಡಾ ತಾಲ್ಲೂಕಿನ ಕುಂಬಾರವಾಡ -ಅಣಶಿ ಮಾರ್ಗದಲ್ಲಿ ಸದಾಶಿವಗಡ -ಔರಾದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.