ADVERTISEMENT

ಕಾರವಾರ | ಬಿರುಸಿನ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:21 IST
Last Updated 10 ಜುಲೈ 2024, 14:21 IST
ಕಾರವಾರ ತಾಲ್ಲೂಕಿನ ಅರ್ಗಾ ಬಳಿ ನೀರು ತುಂಬಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನ ಸವಾರರು ಸಾಗಿದರು
ಕಾರವಾರ ತಾಲ್ಲೂಕಿನ ಅರ್ಗಾ ಬಳಿ ನೀರು ತುಂಬಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನ ಸವಾರರು ಸಾಗಿದರು   

ಕಾರವಾರ: ಜಿಲ್ಲೆಯ ಹಲವೆಡೆ ಬುಧವಾರ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಿತಾದರೂ, ತಾಲ್ಲೂಕಿನಲ್ಲಿ ಕೆಲ ತಾಸುಗಳವರೆಗೆ ಸುರಿದ ರಭಸದ ಮಳೆಗೆ ಅರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಜಲಾವೃತ ಸಮಸ್ಯೆ ಉಂಟಾಯಿತು.

ಸುಮಾರು ಎರಡೂವರೆ ತಾಸುಗಳ ಕಾಲ ನಿರಂತರ ಮಳೆ ಸುರಿದಿದ್ದರಿಂದ ನಗರದ ಹಲವೆಡೆ, ಗ್ರಾಮೀಣ ಪ್ರದೇಶದ ಅರ್ಗಾ, ಚೆಂಡಿಯಾ ಗ್ರಾಮಗಳಲ್ಲಿ ಜಲಾವೃತ ಸಮಸ್ಯೆ ತಲೆದೋರಿತು. ಅರ್ಗಾ ಗ್ರಾಮದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಆವರಿಸಿಕೊಂಡಿದ್ದರಿಂದ ದ್ವಿಚಕ್ರ ವಾಹನಗಳು ಸಾಗಲು ಅಡಚಣೆ ಉಂಟಾಯಿತು.

ಚೆಂಡಿಯಾ, ಇಡೂರು ಗ್ರಾಮಗಳಲ್ಲಿ ಹತ್ತಾರು ಮನೆಗಳ ಸುತ್ತ ನೀರು ತುಂಬಿಕೊಂಡು ಜನರು ಹೊರಗೆ ಸಾಗಲು ಅಡ್ಡಿ ಉಂಟಾಗಿತ್ತು. ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ಈ ಸಮಸ್ಯೆ ಸೃಷ್ಟಿಯಾಗಿತ್ತು.

ADVERTISEMENT

‘ಹೆದ್ದಾರಿ ಕಾಮಗಾರಿಗೆ ಕೆಲವೆಡೆ ಜಾಗ ಎತ್ತರಿಸಲಾಗಿದೆ. ನೌಕಾನೆಲೆಯಲ್ಲಿ ಮಳೆನೀರು ಹರಿದು ಹೋಗಬೇಕಿರುವ ಕಾಲುವೆ ಮುಚ್ಚಿರುವ ಶಂಕೆ ಇದೆ. ಇವೆರಡೂ ಕಾಮಗಾರಿಗಳಿಂದ ಚೆಂಡಿಯಾ, ಅರ್ಗಾ ಗ್ರಾಮಗಳಲ್ಲಿ ಜಲಾವೃತ ಸಮಸ್ಯೆ ಹೆಚ್ಚಿದೆ. ಸಮಸ್ಯೆ ಬಗೆಹರಿಸದಿದ್ದರೆ ಭವಿಷ್ಯದಲ್ಲಿ ಇಲ್ಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ’ ಎಂದು ಅರ್ಗಾ ಗ್ರಾಮದ ಮೋಹನ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.