ADVERTISEMENT

 ಗಾಳಿ-ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:53 IST
Last Updated 7 ಜುಲೈ 2024, 14:53 IST
ಹೊನ್ನಾವರದ ಕರ್ನಲ್ ಹಿಲ್ ಸಮೀಪ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಚಾರಕ್ಕೆ ತೊಂದರೆಯಾಯಿತು
ಹೊನ್ನಾವರದ ಕರ್ನಲ್ ಹಿಲ್ ಸಮೀಪ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಚಾರಕ್ಕೆ ತೊಂದರೆಯಾಯಿತು   

ಹೊನ್ನಾವರ: ತಾಲ್ಲೂಕಿನಾದ್ಯಂತ ಭಾನುವಾರ ಬೆಳಗಿನಿಂದ ರಭಸದ ಮಳೆಯಾಗಿದ್ದು, ಗಾಳಿ-ಮಳೆಯಿಂದ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಂಕಿ ಸಮೀಪದ ಕುಂಬಾರಕೇರಿ ಹಾಗೂ ಗುಂದದಲ್ಲಿ ಮಳೆನೀರು ನಿಂತು ಮನೆಗಳು ಜಲಾವೃತವಾದವು.

‘ಎನ್.ಡಿ.ಆರ್.ಎಫ್.ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಅಲ್ಲಿನ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು. ಕೆಲ ಸಮಯದ ನಂತರ ಕುಂಬಾರಕೇರಿ ಭಾಗದಲ್ಲಿ ನೀರು ಇಳಿಯಿತಾದರೂ ಗುಂದದಲ್ಲಿ ಪರಿಸ್ಥಿತಿ ಹಾಗೆಯೇ ಮುಂದುವರಿದಿದ್ದರಿಂದ ಅಲ್ಲಿನ 13 ಕುಟುಂಬಗಳ 37 ಸದಸ್ಯರಿಗೆ ಕುಂಬಾರಕೇರಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ’ ಎಂದು ಸ್ಥಳದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿ ಶ್ರವಣ ಮಾಹಿತಿ ನೀಡಿದರು.

‘ಮಾಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಮೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದೆ. ಹಳದೀಪುರ ಸಣ್ಮನೆಚಿಟ್ಟೆಯ ಹಾಣಿ ದೇವು ಗೌಡ ಅವರ ಮನೆಯ ಗೋಡೆ ಹಾಗೂ ಚಾವಣಿಗೆ ಹಾನಿಯಾಗಿದೆ. ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಳಗಿಯಲ್ಲಿ ಭೂಕುಸಿತ ಉಂಟಾಗಿದೆ. ಅಪ್ಸರಕೊಂಡ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಟ್ಟಣದ ಕರ್ನಲ್ ಹಿಲ್ ಸಮೀಪ ಗುಡ್ಡ ಕುಸಿದು ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕಾಯಿತು. ಗುಂಡಬಾಳಾ ನದಿಯಲ್ಲಿ ನೆರೆ ನೀರು ತೋಟಗಳನ್ನು ಆವರಿಸಿದ್ದು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆ ನೀರು ನುಗ್ಗಿದ ಹೊನ್ನಾವರ ತಾಲ್ಲೂಕಿನ ಮಂಕಿ ಕುಂಬಾರಕೇರಿ ಹಾಗೂ ಗುಂದ ಗ್ರಾಮಗಳಲ್ಲಿನ ಮನೆಗಳಿಂದ ಜನರನ್ನು ಎನ್.ಡಿ.ಆರ್.ಎಫ್. ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.