ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಶನಿವಾರ ತಡರಾತ್ರಿಯಿಂದ ಜೋರು ಮಳೆ ಮುಂದುವರಿದಿದೆ. ಭಟ್ಕಳದ ಚೌಥನಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ವಿವಿಧ ರಸ್ತೆಗಳು, ಚೌಥನಿ ಗ್ರಾಮ ಸಂಪೂರ್ಣ ಜಲಾವೃತವಾಗಿವೆ.
ಪಟ್ಟಣದ ಶಂಸುದ್ದೀನ್ ವೃತ್ತದಲ್ಲಿ ನೀರು ಹರಿಯದೇ ಜಲಾವೃತಗೊಂಡಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಮಳೆ ಮುಂದುವರಿದಿದೆ.
ಇದನ್ನೂ ಓದಿ: ಭಾರಿ ಮಳೆ – ಕರಾವಳಿ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’
ಕಾರವಾರ, ಅಂಕೋಲಾದಲ್ಲಿ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ದಟ್ಟವಾದ ಮೋಡ ಕವಿದ ವಾತಾವರಣವಿದೆ.
ಭಟ್ಕಳದ ರಂಗಿನಕಟ್ಟೆ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಇದೇರೀತಿ, ಮೂಡುಭಟ್ಕಳ ಗ್ರಾಮವೂ ಸಂಪೂರ್ಣ ಜಲಾವೃತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.