ADVERTISEMENT

ಕಾರವಾರ: ಚಿತ್ತಾರ ಅರಳಿದ ಉದ್ಯಾನದಲ್ಲಿ ಗುಂಪು ಅಧ್ಯಯನ

ಗಣಪತಿ ಹೆಗಡೆ
Published 22 ಡಿಸೆಂಬರ್ 2023, 4:18 IST
Last Updated 22 ಡಿಸೆಂಬರ್ 2023, 4:18 IST
ಜೊಯಿಡಾ ತಾಲ್ಲೂಕಿನ ರಾಮನಗರದ ಸರ್ಕಾರಿ ಪ್ರೌಢಶಾಲೆಯ ಉದ್ಯಾನದಲ್ಲಿ ಚಿತ್ರ ರಚಿಸಲಾದ ಮರದ ಸುತ್ತ ಕೂತು ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿರುವುದು
ಜೊಯಿಡಾ ತಾಲ್ಲೂಕಿನ ರಾಮನಗರದ ಸರ್ಕಾರಿ ಪ್ರೌಢಶಾಲೆಯ ಉದ್ಯಾನದಲ್ಲಿ ಚಿತ್ರ ರಚಿಸಲಾದ ಮರದ ಸುತ್ತ ಕೂತು ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿರುವುದು   

ಕಾರವಾರ: ಕಲಿಕೆಯನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸುವ ಬದಲು ಪರಿಸರದ ನಡುವೆ ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಜೊಯಿಡಾ ತಾಲ್ಲೂಕಿನ ರಾಮನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಕಂಡುಕೊಂಡಿದ್ದಾರೆ.

ಪ್ರೌಢಶಾಲೆಯ ಆವರಣದಲ್ಲಿನ ಉದ್ಯಾನವು ತರಗತಿ ಕೊಠಡಿಯಾಗಿ ಮಾರ್ಪಟ್ಟಿದೆ. ಅಕೇಶಿಯಾ, ಇನ್ನಿತರ ದೊಡ್ಡ ಗಾತ್ರದ ನೂರಕ್ಕೂ ಹೆಚ್ಚು ಮರಗಳನ್ನು ಶಾಲೆಯವರೇ ಬೆಳೆಸಿದ್ದರೆ. ಅದೇ ಮರಗಳಿಗೆ ಚಿತ್ರಕಲಾ ಶಿಕ್ಷಕ ಅದೃಶ್ಯಪ್ಪ ಧರೆನ್ನನವರ್ ಅವರು ಆಕರ್ಷಕ ಚಿತ್ರಗಳನ್ನು ರಚಿಸಿದ್ದಾರೆ. ಚಿತ್ರಗಳು ರಚಿಸಲಾದ ಮರದ ಸುತ್ತ ಕುಳಿತು ಮಕ್ಕಳು ಪಾಠ ಆಲಿಸುತ್ತಾರೆ.

‘ಶಾಲೆಯಲ್ಲಿ 430 ವಿದ್ಯಾರ್ಥಿಗಳು ಇದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಿತ್ಯ ಶಾಲೆಯ ಉದ್ಯಾನದಲ್ಲಿ ತೆಗೆದುಕೊಳ್ಳುತ್ತೇವೆ. 15 ರಿಂದ 20 ವಿದ್ಯಾರ್ಥಿಗಳ ತಲಾ ಒಂದು ಗುಂಪು ರಚಿಸುತ್ತೇವೆ. ಪ್ರತಿ ಗುಂಪನ್ನು ಒಂದೊಂದು ಮರದ ಸುತ್ತ ಕೂರಿಸಿ, ಪಾಠ ಮಾಡುತ್ತೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸುರೇಶ ಗಾಂವಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗುಂಪು ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಸರಿಯಾಗಿ ಮನದಟ್ಟು ಆಗುತ್ತದೆ. ಆಯಾ ಗುಂಪುಗಳಿಗೆ ಶಿಕ್ಷಕರು ಪ್ರಶ್ನೆಗಳನ್ನು ಕೇಳಿ ಮತ್ತು ಚರ್ಚಿಸಿ, ಸಂದೇಹ ಪರಿಹರಿಸುತ್ತಾರೆ. ಇದರಿಂದ ಕಲಿಕೆಯಲ್ಲಿ ಸುಧಾರಣೆ ಕಾಣಿಸಿದೆ’ ಎಂದು ವಿವರಿಸಿದರು.

‘ಕಳೆದ ವರ್ಷ ಕಲಿಕಾ ಉತ್ಸವ ಶಾಲೆಯ ಆವರಣದಲ್ಲಿ ನಡೆದ ಸಂದರ್ಭದಲ್ಲಿ ಮರಗಳಿಗೆ ಬಣ್ಣಗಳಿಂದ ತಾತ್ಕಾಲಿಕ ಚಿತ್ರ ರಚಿಸಲಾಗಿತ್ತು. ಶಾಶ್ವತವಾಗಿರುವಂತೆ ಚಿತ್ರ ರಚಿಸಿದರೆ, ಉದ್ಯಾನದ ಅಂದವೂ ಹೆಚ್ಚುವ ಜತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಬಹುದು ಎಂಬ ಯೋಚನೆ ಬಂತು’ ಎಂದರು.

‘ಮರದ ಆಕಾರಕ್ಕೆ ತಕ್ಕಂತೆ ಹೋಲುವ ಚಿತ್ರ ರಚಿಸಿ, ಚಿತ್ರ ರಚನೆಗೆ ವಿದ್ಯಾರ್ಥಿಗಳ ಅಭಿಪ್ರಾಯ ಕೇಳುತ್ತೇವೆ. ಅವರಲ್ಲೂ ಕ್ರಿಯಾಶೀಲತೆ ಹೆಚ್ಚುತ್ತದೆ. ಸದ್ಯಕ್ಕೆ ಏಳು ಮರಗಳ ಮೇಲೆ ಚಿತ್ರಗಳನ್ನು ರಚಿಸಲಾಗಿದ್ದು, ಇನ್ನೂ 10 ಮರಗಳ ಮೇಲೆ ಚಿತ್ರಗಳನ್ನು ರಚಿಸಲಾಗುವುದು’ ಎಂದು ಶಿಕ್ಷಕ ಅದೃಶ್ಯಪ್ಪ ಧರೆನ್ನವರ ಹೇಳಿದರು.

ಜೊಯಿಡಾ ತಾಲ್ಲೂಕಿನ ರಾಮನಗರದ ಸರ್ಕಾರಿ ಪ್ರೌಢಶಾಲೆಯ ಉದ್ಯಾನದಲ್ಲಿ ಚಿತ್ರ ರಚಿಸಲಾದ ಮರದ ಸುತ್ತ ಕೂತು ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿರುವುದು
ರಾಮನಗರ ಸರ್ಕಾರಿ ಪ್ರೌಢಶಾಲೆಯ ಉದ್ಯಾನದಲ್ಲಿ ಮರಕ್ಕೆ ಚಿತ್ರಕಲೆ ಶಿಕ್ಷಕ ಅದೃಶ್ಯಪ್ಪ ಧರೆನ್ನವರ ಚಿತ್ರ ಬಿಡಿಸುತ್ತಿರುವುದನ್ನು ಮುಖ್ಯ ಶಿಕ್ಷಕ ಸುರೇಶ ಗಾಂವಕರ್ ವೀಕ್ಷಿಸಿದರು
ಉದ್ಯಾನದ ಮರಗಳಿಗೆ ಹಾನಿಯಾಗದಂತೆ ಐದಾರು ವರ್ಷ ಬಾಳಿಕೆ ಬರುವ ಅಪೆಕ್ಸ್ ಬಣ್ಣದಿಂದ ಚಿತ್ರ ರಚಿಸಲಾಗುತ್ತದೆ. ಚಿತ್ರ ರಚನೆಯಾದ ಮರಗಳ ಬಳಿ ಕುಳಿತು ಓದಲು ಮಕ್ಕಳು ಆಸಕ್ತಿ ತೋರುತ್ತಾರೆ.
- ಅದೃಶ್ಯಪ್ಪ ಧರೆನ್ನವರ, ಚಿತ್ರಕಲೆ ಶಿಕ್ಷಕ

‘ನೆನಪಿನ ಶಕ್ತಿ ವೃದ್ಧಿ’

‘ಕೊಠಡಿಯ ಬದಲು ಪ್ರಕೃತಿಯ ನಡುವೆ ಅಧ್ಯಯನ ಅದರಲ್ಲೂ ಗುಂಪು ಅಧ್ಯಯನ ನಡೆಸುವುದು ವಿದ್ಯಾರ್ಥಿಗಳಿಗೆ ಹೊಸತನದ ಅನುಭವ ನೀಡುತ್ತದೆ. ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ವೃದ್ಧಿಸುತ್ತದೆ. ಪರಸ್ಪರ ಚರ್ಚೆ ಪ್ರಶ್ನಿಸುವ ಪದ್ಧತಿಯು ಅವರ ಕಲಿಕೆಗೆ ಇನ್ನಷ್ಟು ಪ್ರೇರೇಪಿಸುತ್ತದೆ. ರಾಮನಗರದ ಪ್ರೌಢಶಾಲೆಯ ಕ್ರಮ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲೂ ನೆರವಾಗುತ್ತದೆ’ ಎಂದು ಕ್ರಿಮ್ಸ್ ಮಾನಸಿಕ ಆರೋಗ್ಯ ವಿಭಾಗದ ಡಾ.ಮೋಹನ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.