ಕಾರವಾರ: ದೇಶದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುವ ‘ಉದ್ದ ಕಣ್ಣಿನ ಏಡಿ’ಯೊಂದು (ಸ್ಯುಡೊಪೊತಾಲಾಮಸ್ ವಿಜಿಲ್) ತಾಲ್ಲೂಕಿನ ಮಾಜಾಳಿಯಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.
ಈ ಏಡಿಗೆ ತನ್ನ ದೇಹದಷ್ಟೇ ಉದ್ದವಿರುವ ಕಡ್ಡಿಯಂಥ ರಚನೆಯ ತುದಿಯಲ್ಲಿ ಕಣ್ಣುಗಳಿರುತ್ತವೆ. ಹವಾಯಿ ದ್ವೀಪ, ಕೆಂಪು ಸಮುದ್ರ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳ ಕಡಲಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.
‘ದೇಶದ ಪೂರ್ವ ಕರಾವಳಿಯಲ್ಲಿ ಬಾಂಗ್ಲಾದೇಶದವರೆಗೂ ಈ ಪ್ರಭೇದದ ಏಡಿಗಳ ವಾಸ್ತವ್ಯವಿದೆ. ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಬಹಳ ವಿರಳವಾಗಿ ಸಿಕ್ಕಿರುವ ಉದಾಹರಣೆಗಳಿವೆ. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತುಕೊಳ್ಳುವ ಈ ಏಡಿಗೆ ಬೇಟೆಯಾಡಲು ದುರ್ಬೀನಿನಂಥ ಕಣ್ಣುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ’ ಎಂದು ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.