ಶಿರಸಿ: ಜನೌಷಧ ಯೋಜನೆ ವಿರೋಧಿಯಾಗಿ ಔಷಧ ಸೂಚಿಸುವ ವೈದ್ಯರನ್ನು ನಿಯಂತ್ರಣದಲ್ಲಿಡಲು 'ರೇಟಿಂಗ್' ಪದ್ಧತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜನೌಷಧ ಕೇಂದ್ರವನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು. ಜನೌಷಧ ಯೋಜನೆಯ ಬಗ್ಗೆ ಗೊಂದಲಗಳಿವೆ. ವೈದ್ಯರು ಈ ಔಷಧ ಬರೆದುಕೊಡುವುದಿಲ್ಲ. ವೈದ್ಯರು ರೋಗಿಗಳಿಗೆ ಔಷಧ ಬರೆದುಕೊಡುವಾಗ ಬ್ರ್ಯಾಂಡ್ ಬರೆದುಕೊಡುವಂತಿಲ್ಲ. ಆದರೆ, ವೈದ್ಯರು ಈ ನಿಯಮ ಅನುಸರಿಸುತ್ತಿಲ್ಲ. ಔಷಧ ಕಂಪನಿಗಳು ಮತ್ತು ವೈದ್ಯರ ನಡುವಿನ ಹೊಂದಾಣಿಕೆ ಇದಕ್ಕೆ ಕಾರಣವಾಗಿದೆ. ಬರುವ ದಿನಗಳಲ್ಲಿ ಮಹಾನಗರಗಳಲ್ಲಿ ಇರುವಂತೆ ಎಲ್ಲಡೆಯೂ ವೈದ್ಯರಿಗೆ ರೇಟಿಂಗ್ ನೀಡುವ ವ್ಯವಸ್ಥೆ ಬರಲಿದೆ ಎಂದರು.
ಜನೌಷಧ ಕೇಂದ್ರದಲ್ಲಿ ಕಳಪೆ ಔಷಧ ವಿತರಣೆ ಮಾಡುವುದಿಲ್ಲ. ಇಲ್ಲಿ ಕಡಿಮೆ ದರದಲ್ಲಿ ಉತ್ತಮ ಔಷಧ ನೀಡಲಾಗುತ್ತದೆ. ಪೇಟೆಂಟ್ ಅವಧಿ ಮುಗಿದ ಔಷಧಿಗಳನ್ನು ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಡ್ರಗ್ ಡಿಸ್ಕವರಿ ಸಿಸ್ಟಮ್ ಇಲ್ಲವಾಗಿದೆ. ಇದು ವೆಚ್ಚದಾಯಕ ಎನ್ನುವ ಕಾರಣದ ಜತೆಗೆ, ಇದರ ಹಿಂದೆ ಲಾಬಿ ಕೂಡ ಕೆಲಸ ಮಾಡುತ್ತಿದೆ. ದೇಶಕ್ಕೆ ಹೊಂದಾಣಿಕೆಯಾಗುವ ಔಷಧ ಯೋಜನೆ ಇಲ್ಲವಾಗಿದೆ. ಕ್ಯಾನ್ಸರ್ ರೋಗದಲ್ಲೂ ಸಹ ಇದೇ ಆಗುತ್ತಿದ್ದು, ವಿದೇಶದಲ್ಲಿ ಕಂಡುಹಿಡಿದಿರುವ ಕಿಮೊ ಇಲ್ಲಿನ ರೋಗಿಗಳಿಗೆ ಹೊಂದಿಕೆಯಾಗದ ಕಾರಣ ಅನೇಕರು ಮರಣ ಹೊಂದುತ್ತಾರೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಬಸವರಾಜ ದೊಡ್ಮನಿ, ಉಷಾ ಹೆಗಡೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಪಂಡಿತ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಜಾನನ ಭಟ್ಟ, ಸ್ಕೊಡ್‌ವೆಸ್ ಕಾರ್ಯದರ್ಶಿ ವೆಂಕಟೇಶ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.