ಶಿರಸಿ: ಕೃಷಿಕರು ಗೋಮಾತೆಯನ್ನು ಆರಾಧಿಸುವ ದೀಪಾವಳಿ ಹಬ್ಬಕ್ಕೆ ಪುಂಡಿ ಗಿಡಗಳ ನಾರಿನ ದಾಬುಗಳ ಬಳಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ಮಾರುಕಟ್ಟೆಗೆ ದಾಬುಗಳನ್ನು ತರಲಾಗುತ್ತದಾದರೂ ಪ್ಲಾಸ್ಟಿಕ್ ದಾಬುಗಳ ಕೊಳ್ಳುವವರ ಸಂಖ್ಯೆ ಹೆಚ್ಚಿರುವ ಕಾರಣ ಸಾಂಪ್ರದಾಯಿಕ ದಾಬುಗಳು ಖಾಲಿಯಾಗದಿರುವುದು ವ್ಯಾಪಾರಸ್ಥರ ನಿರಾಸೆಗೆ ಕಾರಣವಾಗಿದೆ.
ಕೃಷಿಕರ ಪಾಲಿನ ದೊಡ್ಡ ಹಬ್ಬವೆಂದು ಕರೆಯುವ ದೀಪಾವಳಿ ಹಬ್ಬದಲ್ಲಿ ಬಲಿ ಪಾಡ್ಯದ ದಿನ ದನಕರುಗಳ ಮೈತೊಳೆಸಿ ಹೊಸ ದಾಬುಗಳ ಕಣ್ಣಿಯಿಂದ ಅವುಗಳನ್ನು ಕಟ್ಟುವುದು ರೂಢಿಯಲ್ಲಿದೆ. ನಂತರದಲ್ಲಿ ಅವುಗಳಿಗೆ ಬೆಚ್ಚೆಣಿಸಿ ಗೋಗ್ರಾಸ ನೀಡಿ ಪೂಜಿಸಲಾಗುತ್ತದೆ. ಈ ವೇಳೆ ಗೋವುಗಳನ್ನು ಕಟ್ಟುವುದಕ್ಕೆ ಹೊಸ ದಾಬು ಸ್ಥಳೀಯವಾಗಿಯೇ ತಯಾರಾಗುತ್ತಿತ್ತು. ದಾಬು-ಹಣ್ಣಡಕೆ ಕೊಡುಕೊಳ್ಳುವಿಕೆಯೂ ನಡೆಯುತ್ತಿತ್ತು. ಕೆಲವು ಹಳ್ಳಿಗರು ಪೇಟೆಯಿಂದಲೂ ಖರೀದಿಸುತ್ತಿದ್ದರು.
‘ಆದರೆ ಹಳ್ಳಿಗಳಲ್ಲಿ ಪುಂಡಿ ಗಿಡ ಬೆಳೆದು ಅದರ ನಾರಿನಿಂದ ದಾಬು ತಯಾರಿಸುವವರಿಲ್ಲದೇ ಎಲ್ಲರೂ ಪೇಟೆಯತ್ತ ಮುಖಮಾಡತೊಡಗಿದ ಕಾರಣ ಹಳ್ಳಿಯಲ್ಲಿ ತಯಾರಾಗುತ್ತಿದ್ದ ದಾಬುಗಳ ಕೆಲಸ ನಿಂತಿದೆ. ಪ್ರಸ್ತುತ ಮಾರುಕಟ್ಟೆಯಿಂದ ಹಬ್ಬದ ಶಾಸ್ತ್ರಕ್ಕೆ ಪೂರಕವಾಗಿ ಎರಡು ಜೋಡಿ ನಾರಿನ ದಾಬು ತರಲಾಗುತ್ತಿದೆ. ಉಳಿದಂತೆ ಪ್ಲಾಸ್ಟಿಕ್ ದಾಬು ಖರೀದಿಸಲಾಗುತ್ತದೆ’ ಎನ್ನುತ್ತಾರೆ ಹುಲೇಕಲ್‍ನ ಕೃಷಿಕರಾದ ನರಸಿಂಹ ಹೆಗಡೆ.
‘ಇತ್ತೀಚಿನ ವರ್ಷಗಳಲ್ಲಂತೂ ಗ್ರಾಮೀಣ ಪ್ರದೇಶದ ಶೇ 90ರಷ್ಟು ಮಂದಿ ನಗರದ ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ದಾಬು ಖರೀದಿಸುತ್ತಿದ್ದು, ಪುಂಡಿ ನಾರಿನ ದಾಬು ಹಬ್ಬದ ಸಾಮಾನುಗಳ ಖರೀದಿಯಲ್ಲಿ ಕಡೆಯ ಸ್ಥಾನ ಪಡೆದಿದೆ. ಹಿಂದಿನಿಂದಲೂ ಪೇಟೆಗಳಲ್ಲಿ ದಾಬುಗಳು ಭರಪೂರ ಸಂಖ್ಯೆಯಲ್ಲಿ ಪೂರೈಕೆಯಾಗುತ್ತಿವೆ. ಸುಮಾರು ಇಪ್ಪತ್ತು ವರ್ಷದ ಹಿಂದೆ ಹುಬ್ಬಳ್ಳಿ ಮೂಲಕ ಶಿರಸಿಗೆ ಸುಮಾರು 2 ಲಕ್ಷ ಸಂಖ್ಯೆಯ ಪುಂಡಿ ದಾಬುಗಳನ್ನು ತರಿಸಲಾಗುತ್ತಿತ್ತು. ಈಗ ಅಂದಾಜು 50 ಸಾವಿರಕ್ಕೆ ಇಳಿದಿದೆ’ ಎಂದು ಹಿರಿಯ ಸಗಟು ವ್ಯಾಪಾರಿ ಮಹಮ್ಮದ ಅಲಿ ತಿಳಿಸುತ್ತಾರೆ.
‘ಪಶ್ಚಿಮ ಬಂಗಾಲದ ಕೊಲ್ಕೊತ್ತಾದಿಂದ ತರಿಸಿಕೊಳ್ಳುವ ಪುಂಡಿ ನಾರನ್ನು ಹೆಣೆದು ಇಂಥ ದಾಬುಗಳನ್ನು ತಯಾರಿಸಲಾಗುತ್ತದೆ ಎನ್ನುವುದು ವಿಶೇಷ. ಬಹುಪಾಲು ಹುಬ್ಬಳ್ಳಿ ಸಮೀಪದ ಕರಡಿಕೊಪ್ಪದಲ್ಲಿ ಹೆಣಿಗೆಯಾಗಿ ಉತ್ತರ ಕನ್ನಡದ ಹಳ್ಳಿ-ಪಟ್ಟಣಗಳಿಗೆ ಪೂರೈಕೆಯಾಗುತ್ತದೆ. ನೇರವಾಗಿ ನಾರು ಶಿರಸಿಗೆ ತಂದು ಕೆಲಪ್ರಮಾಣದಲ್ಲಿ ಇಲ್ಲಿಯೂ ದಾಬು ತಯಾರಿಸಲಾಗುತ್ತದೆ. ಆದರೆ ಪ್ಲಾಸ್ಟಿಕ್ ದಾಬಿನ ಬೇಡಿಕೆ ಮುಂದೆ ಪುಂಡಿ ನಾರಿನ ದಾಬು ಮಂಕಾಗಿದೆ. ಪ್ಲಾಸ್ಟಿಕ್ ದಾಬೊಂದಕ್ಕೆ ₹100 ಕೊಡುವ ಗ್ರಾಹಕರು ಜೋಡಿ ಪುಂಡಿ ದಾಬಿಗೆ ₹30 ಕೊಡಲು ಯೋಚಿಸುತ್ತಾರೆ’ ಎನ್ನುತ್ತಾರೆ ಅವರು.
ಕಳೆದ ಎರಡು ದಶಕಗಳ ಈಚೆಗೆ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ತೀವ್ರ ಇಳಿಮುಖವಾಗುತ್ತ ಬಂದಿದೆ. ಅಂತೆಯೇ ದೀಪಾವಳಿ ಸಂದರ್ಭದಲ್ಲಿ ಗೋವುಗಳ ಅಲಂಕಾರ ಸಾಮಗ್ರಿಗಳ ಖರೀದಿ ಮಾಡುವವರು ವಿರಳವಾಗುತ್ತಿದ್ದಾರೆವರದರಾಜ ದಾಬು ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.