ADVERTISEMENT

ಸಂವಿಧಾನ ದೇಶದ ಪವಿತ್ರ ಗ್ರಂಥ: ಸಚಿವ ವೈದ್ಯ

ಜಿಲ್ಲೆಯಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 12:57 IST
Last Updated 26 ಜನವರಿ 2024, 12:57 IST
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ಅರ್ಪಿಸಿದರು
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ಅರ್ಪಿಸಿದರು   

ಕಾರವಾರ: ‘ಸಂವಿಧಾನ ದೇಶದ ಪವಿತ್ರ ಗ್ರಂಥ. ಸಾಮಾನ್ಯ ವ್ಯಕ್ತಿಯೂ ಅಧಿಕಾರಯುತವಾಗಿ ಮಾತನಾಡಲು ಅದು ಧ್ವನಿ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ದೇಶ ಅಭಿವೃದ್ಧಿಯತ್ತ ದಾಪುಗಾಲಿಡಲು ಬಿ.ಆರ್. ಅಂಬೇಡ್ಕರ್‌ ಬರೆದ ಸಂವಿಧಾನವೇ ಕಾರಣ. ಅದನ್ನು ಬದಲಿಸುವ ಪ್ರಯತ್ನ ನಡೆಸುವವರಿಗೆ ಯಾವುದೇ ಕಾರಣಕ್ಕೆ ಅವಕಾಶ ನೀಡಲಾಗದು’ ಎಂದರು.

ADVERTISEMENT

‘ಕಿರು ಬಂದರುಗಳಿಗೆ ರಸ್ತೆ, ರೈಲು ಸಂಪರ್ಕ ಕಲ್ಪಿಸಲು ಬಹುಮಾದರಿ ಸಂಪರ್ಕ ಯೋಜನೆ ತಯಾರಿಸಲಾಗುತ್ತಿದೆ. ಸಾಗರಮಾಲಾ ಯೋಜನೆಯ ಅಡಿ ₹ 303.46 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ಸಿಕ್ಕಿದೆ’ ಎಂದರು.

ಪೊಲೀಸ್, ಗೃಹರಕ್ಷಕ, ಅರಣ್ಯ ಇಲಾಖೆ, ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 14 ತಂಡಗಳು ಶಿಸ್ತುಬದ್ಧ ಪಥಸಂಚಲನ ನಡೆಸಿದವು. ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಬಹುಮಾನ‌ಗಳಿಸಿದ ವಿದ್ಯಾರ್ಥಿಗಳಿಗೆ, ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪಡೆದ ಜಿಲ್ಲೆಯ ಮೂವರು ರೈತರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಬಂದರು ಜಲಸಾರಿಗೆ ಮಂಡಳಿ ಸಿಇಒ ಜಯರಾಮ ರಾಯಚೂರ ಪಾಲ್ಗೊಂಡಿದ್ದರು.

ಕಾರವಾರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೇಂಟ್ ಮೈಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.