ಶಿರಸಿ: ಇಲ್ಲಿನ ಚೌಕಿಮಠದಲ್ಲಿ ಅಬಕಾರಿ ಇಲಾಖೆಗೆ ಸೇರಿದ್ದ ಜಾಗದಲ್ಲಿ ಸ್ಥಾಪನೆಯಾಗಿದ್ದ ಪ್ರಸಾರ ಭಾರತಿಯ ದೂರದರ್ಶನ ಮರುಪ್ರಸಾರ ಕೇಂದ್ರ ಸ್ಥಗಿತಗೊಂಡಿದೆ. ಈ ಜಾಗವನ್ನು ಸುಪರ್ದಿಗೆ ಪಡೆಯಲು ಕಂದಾಯ ಇಲಾಖೆ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಸಲ್ಲಿಸಿದೆ.
ಸುಮಾರು ನಾಲ್ಕು ದಶಕಗಳ ಹಿಂದೆ ಸ್ಥಾಪನೆಯಾಗಿದ್ದ ಮರುಪ್ರಸಾರ ಕೇಂದ್ರದಿಂದಾಗಿ ಚೌಕಿಮಠದ ಮಾರ್ಗಕ್ಕೆ ಟಿವಿ ಸ್ಟೇಶನ್ ರಸ್ತೆ ಎಂಬ ಹೆಸರು ಬಂದಿತ್ತು. ಟಿವಿ ಎಂಟೆನಾಗಳ ಬಳಕೆ ಹೆಚ್ಚಿದ್ದ ಕಾಲದಲ್ಲಿ ಮರುಪ್ರಸಾರ ಕೇಂದ್ರ ಹೆಚ್ಚು ಪ್ರಾಮುಖ್ಯತೆಯಲ್ಲಿತ್ತು. ಕಾಲಕ್ರಮೇಣ ಬಳಕೆದಾರರ ಸಂಖ್ಯೆ ಕ್ಷೀಣಿಸಿದ ಬಳಿಕ ಈ ಕೇಂದ್ರದ ಕೆಲಸವೂ ಕಡಿಮೆಯಾಯಿತು.
ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಸರ್ಕಾರ ಮರುಪ್ರಸಾರ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಗೊಂಡ ಪರಿಣಾಮ ಇಲ್ಲಿನ ಕೇಂದ್ರವೂ ಸ್ಥಗಿತಗೊಂಡಿದೆ. ನಗರದ ಹೃದಯಭಾಗದಲ್ಲಿರುವ ಈ ಜಾಗವನ್ನು ಖಾಲಿ ಬಿಡುವ ಬದಲು ಬಳಸಿಕೊಳ್ಳಲು ಕಂದಾಯ ಇಲಾಖೆ ಮುಂದಾಗಿದೆ.
‘ಮರುಪ್ರಸಾರ ಕೇಂದ್ರ ಸ್ಥಗಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಅಲ್ಲಿರುವ ಯಂತ್ರೋಪಕರಣಗಳು, ಕಬ್ಬಿಣದ ಸಾಮಗ್ರಿಗಳನ್ನು ಹರಾಜು ಮೂಲಕ ವಿಲೇವಾರಿಗೊಳಿಸಬೇಕಿದೆ. ಇದಕ್ಕಾಗಿ ಎರಡು ತಿಂಗಳು ಕಾಲಾವಕಾಶ ಕೋರಿದ್ದೇವೆ’ ಎಂದು ಪ್ರಸಾರ ಭಾರತಿ ಶಿವಮೊಗ್ಗ ಕಚೇರಿಯ ಸಹಾಯಕ ಎಂಜಿನಿಯರ್ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೂರದರ್ಶನ ಮರುಪ್ರಸಾರ ಕೇಂದ್ರವಿದ್ದ ಸುಮಾರು ಒಂದು ಎಕರೆಯಷ್ಟು ವಿಸ್ತಾರವಾದ ಜಾಗ ಅಬಕಾರಿ ಇಲಾಖೆಗೆ ಸೇರಿದೆ. ಇಲ್ಲಿರುವ ಕಟ್ಟಡಗಳನ್ನು ಸದ್ಯ ತೆರವುಗೊಳಿಸುವ ಬದಲು ಅಲ್ಲಿ ಗ್ರಾಮಚಾವಡಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಜಿಲ್ಲಾಧಿಕಾರಿ ಅವರಿಗೂ ಪ್ರಸ್ತಾವ ನೀಡಲಾಗಿದೆ’ ಎಂದು ತಹಶೀಲ್ದಾರ ಎಂ.ಆರ್.ಕುಲಕರ್ಣಿ ಹೇಳಿದರು.
‘ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಇಲಾಖೆಗಳಿಗೆ ಕಚೇರಿ ಒದಗಿಸಲು ಈ ಜಾಗ ಸೂಕ್ತವಾಗಿದೆ. ಹೀಗಾಗಿ ಕಚೇರಿ ಸಂಕೀರ್ಣ ಸ್ಥಾಪನೆಗೆ ಇದು ಸೂಕ್ತ ಜಾಗವಾಗಿದೆ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಮರುಪ್ರಸಾರ ಕೇಂದ್ರ ಸ್ಥಾಪನೆಗೆ ಜಾಗ ನೀಡಲು ಇಲಾಖೆಯ ಆಯುಕ್ತರೇ ಹಿಂದೆ ಸಮ್ಮತಿ ಸೂಚಿಸಿದ್ದರು. ಈಗ ಕೇಂದ್ರ ಸ್ಥಗಿತಗೊಂಡಿದ್ದರಿಂದ ಜಾಗ ಖಾಲಿ ಉಳಿಯುತ್ತದೆ. ಅದು ಬಳಕೆಯಲ್ಲಿರಲಿ ಎಂಬ ಕಾರಣಕ್ಕೆ ಕಂದಾಯ ಇಲಾಖೆ ಬಳಸಿಕೊಳ್ಳಲು ಮುಂದೆ ಬಂದಿದೆ. ಇದಕ್ಕೆ ಅಭ್ಯಂತರವಿಲ್ಲ’ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.