ADVERTISEMENT

ಅಚವೆಯಲ್ಲಿ ಗ್ರಾಮ ವಾಸ್ತವ್ಯ 15ರಂದು: ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 13:23 IST
Last Updated 1 ಏಪ್ರಿಲ್ 2022, 13:23 IST
ಕಂದಾಯ ಸಚಿವ ಆರ್.ಅಶೋಕ ಅವರ ಗ್ರಾಮ ವಾಸ್ತವ್ಯ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ಸಚಿವ ಕೋಟ ಶ್ರೀನಿವಾಸ ಪೂಜಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಇದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಅವರ ಗ್ರಾಮ ವಾಸ್ತವ್ಯ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ಸಚಿವ ಕೋಟ ಶ್ರೀನಿವಾಸ ಪೂಜಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಇದ್ದಾರೆ.   

ಕಾರವಾರ: ಕಂದಾಯ ಸಚಿವ ಆರ್.ಅಶೋಕ ಅವರು ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಏ.14ರಂದು ಸಂಜೆ ಗ್ರಾಮಕ್ಕೆ ಬರುವ ಅವರು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 15ರಂದು ದಿನವಿಡೀ ಗ್ರಾಮದಲ್ಲಿದ್ದು, ಫಲಾನುಭವಿಗಳಿಗೆ ಇಲಾಖೆಯ ಸವಲತ್ತುಗಳ ವಿತರಣೆ, ಅಹವಾಲು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. 16ರಂದು ಬೆಳಿಗ್ಗೆ ನಿರ್ಗಮಿಸಲಿದ್ದಾರೆ.

ಗ್ರಾಮ ವಾಸ್ತವ‌್ಯ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಮಾಹಿತಿ ನೀಡಿದರು.

‘ಈ ಹಿಂದೆ ಸಚಿವ ಅಶೋಕ ಅವರು 15ಕ್ಕೆ ಬರುವುದಾಗಿ ತಿಳಿಸಲಾಗಿತ್ತು. ಆದರೆ, ಕಾರ್ಯಕ್ರಮವನ್ನು ಒಂದು ದಿನ ಮುಂಚಿತವಾಗಿ ಆಯೋಜಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಜಿಲ್ಲೆಯ ಗ್ರಾಮೀಣ ಸೊಗಡು, ಇಲ್ಲಿನ ಪರಂಪರೆ, ಸಂಪ್ರದಾಯಗಳನ್ನು ಬಿಂಬಿಸುವ ವಾತಾವರಣ ಇರುವ, ಬುಡಕಟ್ಟು ಜನರು ಹೆಚ್ಚಿರುವ ನಿಸರ್ಗ ಸೌಂದರ್ಯದ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಅಂದು 3 ಸಾವಿರದಿಂದ 4 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿರುವುದು ಸಮಾಧಾನ ತಂದಿದೆ’ ಎಂದರು.

‘ಬಡವರ ಕಲ್ಯಾಣಕ್ಕಾಗಿ ಕಂದಾಯ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಫಲಗಳನ್ನು ಜನರಿಗೆ ಹೇಗೆ ವಿತರಿಸಬಹುದು, ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವುದು, 94 ಸಿ, 94 ಸಿ.ಸಿ ಹಕ್ಕುಪತ್ರಗಳು, ಮನೆಗಳ ಮಂಜೂರಾತಿ, ಪಿಂಚಣಿ, ಅರ್ಜಿ ನಮೂನೆ ಸಂಖ್ಯೆ 57ರ ಅಡಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ತುಂಬ ಜನರಿಗೆ ಅನುಕೂಲವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿವಿಧ ಯೋಜನೆಗಳಡಿಯಲ್ಲಿ ಈ ಹಿಂದೆ ಮಂಜೂರಾತಿ ಪಡೆದವರು, ವೃದ್ಧರು, ಅಂಗವಿಕಲರನ್ನು ಕಾರ್ಯಕ್ರಮಕ್ಕೆ ಕರೆಯಬೇಡಿ. ಈಗ ಹೊಸದಾಗಿ ಹಕ್ಕುಪತ್ರ ಪಡೆಯುವವರನ್ನು ಮಾತ್ರ ಕರೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾರಾದರೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಬಿಟ್ಟುಹೋಗಿದ್ದರೆ ಅವರಿಗೆ ಮಂಜೂರಾತಿ ನೀಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಸಚಿವರಿಗೆ ಆಹ್ವಾನ:‘ಕಂದಾಯ ಸಚಿವ ಆರ್.ಅಶೋಕ ಅವರು ಈ ಹಿಂದೆ ಯಾದಗಿರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಆ ಜಿಲ್ಲೆಗಳಲ್ಲಿ ಸಾಕಷ್ಟು ಜನರಿಗೆ ಪ್ರಯೋಜನವಾಗಿದೆ. ಅಚವೆಯಲ್ಲೂ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಸಹಕಾರಿಯಾಗಲಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಏ.15ರ ಸಭೆಗೆ ಇಂಧನ ಸಚಿವ ಸುನಿಲ್ ಕುಮಾರ್ ಅವರನ್ನೂ ಆಹ್ವಾನಿಸಲಾಗಿದೆ. ಉಳಿದಂತೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.