ಕುಮಟಾ: ಕಳೆದ ಒಂದು ತಿಂಗಳಿಂದ ಕುಮಟಾ ತಾಲ್ಲೂಕಿನ ವಿವಿಧೆಡೆ ರಾತ್ರಿ ಹೊತ್ತು ತೆರೆದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ದನ, ಕರುಗಳನ್ನು ಕೊಂದು ಹಾಕಿದೆ. ತಾಲ್ಲೂಕಿನ ಕೊನಳ್ಳಿ, ಕೂಜಳ್ಳಿ, ಕಲ್ಲಬ್ಬೆ, ಊರಕೇರಿ, ಉಚಂಗಿ, ಧಾರೇಶ್ವರದಲ್ಲಿ ಚಿರತೆ ದಾಳಿ ಪ್ರಕರಣಗಳು ಹಚ್ಚಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಕುಮಟಾ ವಲಯ ಅರಣ್ಯ ಅಧಿಕಾರಿ ಎಸ್.ಟಿ.ಪಟಗಾರ, ‘ಕೋನಳ್ಳಿ ಗ್ರಾಮದ ಕೆಂಗೇರಿಯ ಗೋಪಾಲ ನಾಯ್ಕ ಹಾಗೂ ತಿಮ್ಮಪ್ಪ ನಾಯ್ಕ ಅವರ ಮನೆಯ ಹಸುಗಳನ್ನು ಇತ್ತೀಚೆ ಚಿರತೆ ಕೊಂದು ಹಾಕಿದೆ' ಎಂದರು.
‘ಚಿರತೆ ಹೆಚ್ಚಾಗಿ ಹಂದಿ ಮರಿಗಳನ್ನು ಗುರಿಯಾಗಿಸಿಕೊಂಡಿರುತ್ತವೆ. ಆದ್ದರಿಂದ ತಾಲ್ಲೂಕಿನ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಕಾಡಿನ ಪ್ರದೇಶದಲ್ಲಿ ಹಂದಿಹಾವಳಿ ಕಡಿಮೆಯಾಗಿದೆ. ಚಿರತೆ ದಾಳಿಗೀಡಾದ ದನಕರುಗಳಿಗೆ ಅರಣ್ಯ ಇಲಾಖೆ ಸ್ಥಳದಲ್ಲಿಯೇ ₹10 ಸಾವಿರ ಪರಿಹಾರ ನೀಡುತ್ತಿದೆ. ಮಾರ್ಚ್‌ವರೆಗಿನ ಪ್ರಕರಣಗಳಿಗೆ ಪರಿಹಾರ ವಿತರಣೆ ಆಗಿದ್ದು, ನಂತರದ ಪ್ರಕರಣಗಳ ಅರ್ಜಿಗಳನ್ನು ಪಡೆಯಲಾಗಿದೆ‘ ಎಂದರು.
‘ಚಿರತೆ ಹಿಡಿಯಲು ಹಲವೆಡೆ ಬೋನು ಇಟ್ಟರೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಚಿರತೆ ಒಮ್ಮೆ ದಾಳಿ ನಡೆಸಿದ ಪ್ರದೇಶದಲ್ಲಿ ಮತ್ತೆ ಬರುವುದು ಅಪರೂಪ. ಹಾಗಾಗಿ ಚಿರತೆ ಬರುವ ಸ್ಥಳ ಅಂದಾಜಿಸಿ ಬೋನು ಇಡುವುದು ಸವಾಲಾಗಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.