ಶಿರಸಿ: ‘ಸಾರ್ವಜನಿಕರಿಗೆ ತೊಂದರೆ ಆಗುವ ರೀತಿ ಯಾವುದೇ ರಸ್ತೆ ನಿರ್ಮಾಣ ಕಂಪನಿ, ಗುತ್ತಿಗೆದಾರರು ನಡೆದುಕೊಂಡರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಯಿಂದ ಜನತೆ ಹೈರಾಣಾಗಿದೆ. ಆದರೆ ಗುತ್ತಿಗೆ ಕಂಪನಿಗಳು, ಗುತ್ತಿಗೆದಾರರು ಮಾತ್ರ ಇನ್ನಷ್ಟು ಸಮಸ್ಯೆ ತಂದೊಡ್ಡುವಂತೆ ಕಾಣುತ್ತಿದೆ. ಶಿರಸಿ ಕುಮಟಾ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸುವಂತೆ ಕೋರಿದ್ದು ಸರಿಯಲ್ಲ’ ಎಂದರು.
‘ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಸಮಸ್ಯೆ ಆಗುತ್ತಿದೆ. ಆದರೆ ಮರಳುಗಾರಿಕೆ ಪ್ರಕರಣ ಹಸಿರು ನ್ಯಾಯಾಧೀಕರಣದ ಮುಂದಿದ್ದು, ಶೀಘ್ರವೇ ನಿರ್ಣಯ ಬರಲಿದೆ. ಜನಪರ ತೀರ್ಮಾನ ಬರುವ ವಿಶ್ವಾಸವಿದೆ. ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಿಲ್ಲ. ಹೀಗಾಗಿ ಚುನಾವಣೆ ಆಗುವವರೆಗೆ ಅಕ್ರಮ ಸಕ್ರಮ ವಿಚಾರಣೆ ನಡೆಯುವುದಿಲ್ಲ. ಹಳೆಯ ಅತಿಕ್ರಮಣದಾರರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದರು.
‘ಜಿಲ್ಲೆ ಅಭಿವೃದ್ಧಿ ಆಗಿದೆ ಎಂದಾದರೆ ಅದಕ್ಕೆ ಸಹಕಾರ ಸಂಘಗಳು ಕಾರಣ. ಹಾಗಾಗಿ ಆ ಕ್ಷೇತ್ರದಲ್ಲಿ ಆರ್ಥಿಕ ಅವ್ಯವಹಾರ ಆಗದಂತೆ ಕಠಿಣ ಕ್ರಮ ಅನುಸರಿಸಲಾಗುವುದು’ ಎಂದರು.
‘ಜಿಲ್ಲೆಯ ಜಲಪಾತಗಳ ಬಳಿ ಜೀವ ರಕ್ಷಕ ಸಿಬ್ಬಂದಿ ನೇಮಿಸಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಹಂತ ಹಂತವಾಗಿ ಖಾಲಿ ಸ್ಥಾನ ತುಂಬುವ ಕೆಲಸ ಮಾಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.