ಯಲ್ಲಾಪುರ: ಮೂತ್ರ ವಿಸರ್ಜನೆಗೆಂದು ನಿಂತಿದ್ದ ವ್ಯಕ್ತಿಯ ಬಳಿ ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದು ಮುಖಕ್ಕೆ ಕಾರದ ಪುಡಿ ಎರಚಿ ಕಿಸೆಯಲ್ಲಿದ್ದ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಬುಧವಾರ ರಾತ್ರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನೂತನನಗರ ಜಡ್ಡಿಯ ಮೀರ್ ಆದಂ ಮೀರ್ ಮುನಾಪ್ (20), ಕಾಳಮ್ಮನಗರದ ರವಿ ನಾರಾಯಣ ಸಿದ್ದಿ (29), ಮಹಮದ್ ರಿಜ್ವಾನ್ (22) ಜಹಿರುದ್ಧೀನ್ (28) ದೆಹಳ್ಳಿಯ ನಾಗೇಂದ್ರ ಬಾಬು ಸಿದ್ದಿ (34) ಬಂಧಿತರು.
₹25 ಸಾವಿರ ನಗದು, ದರೋಡೆ ಮಾಡಿದ ಸ್ಕೂಟರ್, ಅಪರಾಧ ಕೃತ್ಯಕ್ಕೆ ಬಳಸಿದ ಇನ್ನೆರಡು ಸ್ಕೂಟರ್ ಹಾಗೂ ಐದು ಮೊಬೈಲ್ ಸೇರಿದಂತೆ ಒಟ್ಟು ₹1.93 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಶಿರಸಿಯ ಬನವಾಸಿ ರಸ್ತೆ ಕುರ್ಸೆ ಕಾಂಪೌಂಡ್ ಬಳಿಯ ಅಕ್ತರ್ ಗಂಗೋಳ್ಳಿ ಎಂಬುವವರು ನ. 19ರಂದು ಕಿರವತ್ತಿಗೆ ಹೋಗಿ ಅಲ್ಲಿನ ಮರಮಟ್ಟು ಸಂಗ್ರಹಾಲಯದಲ್ಲಿನ ನಾಟಾಗಳನ್ನು ಪರಿಶೀಲಿಸಿದ್ದರು. ನಂತರ ಸಂಜೆ ಯಲ್ಲಾಪುರ - ಶಿರಸಿ ಮಾರ್ಗವಾಗಿ ತಮ್ಮ ಊರಿಗೆ ಸ್ಕೂಟರ್‌ನಲ್ಲಿ ಹೊರಟಿದ್ದರು. ಈ ವೇಳೆ ಮೂತ್ರ ವಿಸರ್ಜನೆಗಾಗಿ ಅವರು ಹಲಸ್ಕಂಡ ಕ್ರಾಸಿನ ಬಳಿ ನಿಂತಾಗ ಎರಡು ಸ್ಕೂಟರ್ ಮೂಲಕ ಬಂದ ಐವರು, ಈ ರಸ್ತೆ ಎಲ್ಲಿ ಹೋಗುತ್ತದೆ ಎಂದು ಕೇಳಿದ್ದರು. ಈ ವೇಳೆ ಆರೋಪಿ ಅಕ್ತರ್ ಅವರ ಮುಖಕ್ಕೆ ಖಾರದಪುಡಿ ಎರಚಿದ್ದ. ಉಳಿದವರೆಲ್ಲರೂ ಸೇರಿ ಕಿಸೆಯಲ್ಲಿದ್ದ ₹50 ಸಾವಿರ ಎಗರಿಸಿದ್ದರು. ಅಕ್ತರ್ ಅವರು ಬೊಬ್ಬೆ ಹೊಡೆಯುವುದನ್ನು ನೋಡಿದ ದುಷ್ಕರ್ಮಿಗಳು ಅವರ ಬಳಿಯಿದ್ದ ಸ್ಕೂಟಿಯನ್ನು ಅಪಹರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.
ಈ ಕುರಿತು ನ. 19ರಂದು ಅಕ್ತರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.