ಕಾರವಾರ: ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥ, ಚಾಲನೆ ಪರವಾನಗಿ ನೀಡುವ ಮುನ್ನ ಪರಿಶೀಲನೆಗೆ ವ್ಯವಸ್ಥಿತ ಜಾಗವೂ ಇಲ್ಲದೆ ಪರದಾಡುತ್ತಿರುವ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯನ್ನು (ಆರ್.ಟಿ.ಒ) ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ನಗರದಿಂದ 18 ಕಿ.ಮೀ ದೂರದ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ ಅರಣ್ಯ ಭೂಮಿ ಮಂಜೂರು ಪಡೆಯಲು ಸಿದ್ಧತೆ ನಡೆದಿದೆ.
ಜಿಲ್ಲೆಯ ನಾಲ್ಕು ಆರ್.ಟಿ.ಒಗಳ ಪೈಕಿ ನಗರದಲ್ಲಿರುವ ಕಚೇರಿ ಅತಿ ಹಳೆಯದಾಗಿದೆ. ಕಾರವಾರ ಮತ್ತು ಅಂಕೋಲಾ ತಾಲ್ಲೂಕು ವ್ಯಾಪ್ತಿಗೆ ಈ ಕಚೇರಿ ಸೇರಿದೆ. ಜಿಲ್ಲಾಕೇಂದ್ರದಲ್ಲಿರುವ ಕಚೇರಿಯಲ್ಲಿ ನಿತ್ಯ ಹತ್ತಾರು ವಾಹನಗಳ ನೋಂದಣಿ, ನೂರಾರು ವಾಹನ ಚಾಲನಾ ಪರವಾನಗಿ, ನವೀಕರಣ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲೇ ಇರುವ ಕಚೇರಿಗೆ ಚಾಲನಾ ಪಥ ನಿರ್ಮಿಸಲು ಜಾಗವೇ ಇಲ್ಲ.
ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಎಲ್ಲ ಆರ್.ಟಿ.ಒಗೆ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಕಡ್ಡಾಯ ಮಾಡಿದೆ. ಸದ್ಯ ಕಾರವಾರ ಆರ್.ಟಿ.ಒ ಹಿಂಭಾಗದಲ್ಲಿ ಕಿರಿದಾದ ಚಾಲನಾ ಸಾಮರ್ಥ್ಯ ಪರಿಶೀಲನೆ ಪಥ ಬಿಟ್ಟರೆ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಇಲ್ಲ. ಅದರ ನಿರ್ಮಾಣಕ್ಕೆ ಜಾಗವೂ ಇಲ್ಲ.
ಹೊಸ ಜಾಗಕ್ಕೆ ಹುಡುಕಾಟ ನಡೆಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಾರವಾರದಲ್ಲಿ ಸ್ಥಳಾವಕಾಶ ಪಡೆಯಲು ಪ್ರಯತ್ನಿಸಿದ್ದರು. ಸಾಧ್ಯವಾಗದ ಕಾರಣಕ್ಕೆ ಪಕ್ಕದ ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಜಾಗ ಗುರುತಿಸಿದ್ದಾರೆ.
‘ಹಾರವಾಡ ಗ್ರಾಮದ ಸರ್ವೆ ನಂ.169ರಲ್ಲಿನ ಐದು ಎಕರೆ ಅರಣ್ಯ ಭೂಮಿಯು ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆಗೆ ಸೂಕ್ತ ಎಂಬುದಾಗಿ ಗುರುತಿಸಲಾಗಿದೆ. ಇಲ್ಲಿ ಸ್ವಯಂ ಚಾಲಿತ ಚಾಲನಾ ಪಥ, ವಶಪಡಿಸಿಕೊಂಡ ವಾಹನಗಳ ನಿಲುಗಡೆ ಸೇರಿದಂತೆ ಸಾರಿಗೆ ಇಲಾಖೆಯ ಅಗತ್ಯ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ, ಈ ಜಾಗ ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಲು ದಾಖಲೆ ಸಿದ್ಧಪಡಿಸಲಾಗುತ್ತಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕತ್ ಹೇಳಿದರು.
‘ಸಾರಿಗೆ ಇಲಾಖೆಯ ಮಾರ್ಗಸೂಚಿ ಪ್ರಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಐದು ಎಕರೆ ಜಾಗ ಪಡೆಯಲು ಪ್ರಯತ್ನಿಸಲಾಗಿದೆ. ಇದಕ್ಕಾಗಿ ₹15.95 ಲಕ್ಷ ಹಾಗೂ ಪರಿಹಾರಾತ್ಮಕ ನೆಡುತೋಪು ಬೆಳೆಸುವ ವೆಚ್ಚವಾಗಿ ₹18.36 ಲಕ್ಷ ಮೊತ್ತವನ್ನು ಪಾವತಿಸಲು ಮಂಜೂರಾತಿ ನೀಡುವಂತೆ ಸಾರಿಗೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ’ ಎಂದೂ ವಿವರಿಸಿದರು.
ಕಾರವಾರದಿಂದ 18 ಕಿ.ಮೀ ದೂರದಲ್ಲಿ ಸ್ಥಳ ಗುರುತು ಅರಣ್ಯ ಸಚಿವಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ಕಚೇರಿ ಸ್ಥಳಾಂತರವಾದರೆ ಸಾರ್ವಜನಿಕರಿಗೆ ಸಮಸ್ಯೆ ಸಾಧ್ಯತೆ
ಆರ್.ಟಿ.ಒ ಸ್ಥಾಪನೆಗೆ ವಿಶಾಲ ಜಾಗಕ್ಕೆ ಕಾರವಾರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ಸೂಕ್ತ ಎನಿಸಿದ ಮತ್ತು ಅಗತ್ಯದಷ್ಟು ವಿಶಾಲ ಭೂಮಿ ಸಿಕ್ಕಿಲ್ಲ. ಹೀಗಾಗಿ ಹಾರವಾಡದ ಜಾಗ ಪಡೆಯಲು ಪ್ರಯತ್ನ ನಡೆದಿದೆಜಾನ್ ಮಿಸ್ಕತ್ ಪ್ರಾದೇಶಿಕ ಸಾರಿಗೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.