ADVERTISEMENT

ನೇಪಥ್ಯದತ್ತ ಮರಳು ದೋಣಿಗಳು: ನೂರಾರು ಕಾರ್ಮಿಕರ ಬದುಕು ಅತಂತ್ರ

ತುಕ್ಕು ಹಿಡಿಯುತ್ತಿರುವ ಕ್ರೇನ್

ಗಣಪತಿ ಹೆಗಡೆ
Published 12 ಡಿಸೆಂಬರ್ 2023, 6:06 IST
Last Updated 12 ಡಿಸೆಂಬರ್ 2023, 6:06 IST
ಕಾರವಾರದ ಕೋಡಿಬಾಗದಲ್ಲಿ ಕಾಳಿನದಿಯ ಹೂಳಿನಲ್ಲಿ ಸಿಲುಕಿ ನಿಂತ ಮರಳು ದೋಣಿಗಳು
ಕಾರವಾರದ ಕೋಡಿಬಾಗದಲ್ಲಿ ಕಾಳಿನದಿಯ ಹೂಳಿನಲ್ಲಿ ಸಿಲುಕಿ ನಿಂತ ಮರಳು ದೋಣಿಗಳು    

ಕಾರವಾರ: ಮರಳು ಗಣಿಗಾರಿಕೆಗೆ ಅನುಮತಿ ಸಿಗದೆ ಅಕ್ರಮ ಗಣಿಗಾರಿಕೆ ಹೆಚ್ಚಿರುವುದು ಒಂದೆಡೆಯಾದರೆ, ನೂರಾರು ಕುಟುಂಬಕ್ಕೆ ಜೀವನಾಧಾರವಾಗಿದ್ದ ಮರಳು ದೋಣಿಗಳು ಕಾಳಿನದಿಯಲ್ಲೇ ವರ್ಷಗಳಿಂದ ನಿಂತು ನೇಪಥ್ಯದತ್ತ ದೃಷ್ಟಿ ನೆಟ್ಟಿವೆ.

ಕಾಳಿನದಿ ಅರಬ್ಬಿ ಸಮುದ್ರ ಸೇರುವ ಇಲ್ಲಿನ ಕೋಡಿಬಾಗದ ಸಂಗಮದಿಂದ ಆರಂಭಿಸಿ ತಾಲ್ಲೂಕಿನ ಉಳಗಾ, ಕೆರವಡಿಯವರೆಗಿನ ಸುಮಾರು 25 ಕಿ.ಮೀ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಮರದ ದೋಣಿಗಳು ಕಾಳಿನದಿಯಲ್ಲಿ ಲಂಗರು ಹಾಕಿ ಎರಡು ವರ್ಷ ಕಳೆದಿದೆ. ಮರಳು ಗಣಿಗಾರಿಕೆಗೆ ಬಳಕೆಯಾಗುತ್ತಿದ್ದ ಅವು ಕೆಲಸ ನಿಲ್ಲಿಸಿ ದೀರ್ಘ ಅವಧಿಯಾಗಿದ್ದರಿಂದ ಶಿಥಿಲಗೊಳ್ಳತೊಡಗಿವೆ.

ನಗರದ ಕೋಡಿಬಾಗದ ಸಮೀಪದಲ್ಲೇ ಕೆಲ ದೋಣಿಗಳು ಮೂರ್ನಾಲ್ಕು ವರ್ಷಗಳಿಂದ ಮರಳು ಗಣಿಗಾರಿಕೆ ಉದ್ಯಮಕ್ಕೆ ಬಳಕೆಯಾಗದ ಪರಿಣಾಮ ಒಡೆದು ಹಾನಿಗೀಡಾಗಿವೆ. ಮರದ ದೋಣಿಗಳ ಪಳಿಯುಳಿಕೆ ಮೇಲೆ ಕಪ್ಪೆಚಿಪ್ಪು ಬೆಳೆದುಕೊಂಡಿದ್ದಲ್ಲದೆ, ಕಾಂಡ್ಲಾ ಸಸಿಗಳೂ ಬೆಳೆದು ನಿಂತಿವೆ.

ADVERTISEMENT

‘ಕೆಲವು ವರ್ಷಗಳಿಂದ ಕಾಳಿನದಿಯಲ್ಲಿ ಮರಳು ಗಣಿಗಾರಿಕೆ ನಡೆಸಲು ಒಂದಲ್ಲ ಒಂದು ಅಡ್ಡಿ ಎದುರಾಗುತ್ತಲೇ ಇದೆ. ಈಗ ಎರಡು ವರ್ಷದಿಂದ ಮರಳು ತೆಗೆಯಲು ಅನುಮತಿ ಸಿಗದೆ ಪರದಾಡುತ್ತಿದ್ದೇವೆ. ಮರಳು ಗಣಿಗಾರಿಕೆಗೆ ಬಳಕೆಯಾಗುತ್ತಿದ್ದ ಕ್ರೇನ್‍ಗಳು, ಮರಳು ಸಾಗಿಸಲು ಬಳಸಲಾಗುತ್ತಿದ್ದ ದೋಣಿಗಳಿಗೆ ಕೆಲಸ ಇಲ್ಲ. ಹೀಗಾಗಿ ನದಿಯ ದಡದಲ್ಲೇ ಇಡಲಾಗಿದ್ದು ಅವು ಉಪ್ಪುನೀರು, ಗಾಳಿ ಮಳೆಗೆ ಸಿಲುಕಿ ಹಾಳಾಗುತ್ತಿವೆ’ ಎನ್ನುತ್ತಾರೆ ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿಗಂಬರ ಶೇಟ್.

‘ತಾಲ್ಲೂಕಿನಲ್ಲೇ ಸುಮಾರು 80ಕ್ಕೂ ಹೆಚ್ಚು ಮರಳು ದೋಣಿಗಳಿವೆ. ಲಕ್ಷಾಂತರ ಮೌಲ್ಯದ ದೋಣಿಗಳು ಬಳಕೆಯಾಗದೆ ಹಾಳಾಗುತ್ತಿದ್ದು ಅವುಗಳ ಮಾಲೀಕರಿಗೂ ಕಷ್ಟವಾಗಿದೆ. ಪ್ರತಿ ದೋಣಿಗೆ ಸರಾಸರಿ 8ರಿಂದ 10 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಉದ್ಯೋಗವಿಲ್ಲದೆ ಅವರು ಕಡಿಮೆ ಮೊತ್ತದ ಕೂಲಿ ಕೆಲಸಕ್ಕೆ ತೆರಳುವ ಸ್ಥಿತಿ ಇದೆ. ಕೆಲವರಿಗೆ ಕೆಲಸವೂ ಸಿಗದೆ ಸಂಕಷ್ಟದಲ್ಲಿದ್ದಾರೆ’ ಎಂದು ವಿವರಿಸಿದರು.

ಕೋಡಿಬಾಗದ ಬಳಿ ಕಾಳಿನದಿಯಲ್ಲಿ ಶಿಥಿಲಗೊಂಡ ಮರಳು ದೋಣಿಯ ಪಳಿಯುಳಿಕೆ ಮೇಲೆ ಕಾಂಡ್ಲಾ ಸಸಿಗಳು ಬೆಳೆದುಕೊಂಡಿರುವುದು

‘ಮರಳನ್ನು ನದಿಯಿಂದ ದಡಕ್ಕೆ ಸಾಗಿಸಲು ಬಳಕೆಯಾಗುವ ದೊಡ್ಡ ಗಾತ್ರದ ದೋಣಿಗಳಿಗೆ ಲಕ್ಷಾಂತರ ವೆಚ್ಚ ಮಾಡಿ ಖರೀದಿಸಲಾಗಿತ್ತು. ದುಡಿಮೆ ಇಲ್ಲದೆ ಅವುಗಳನ್ನು ದುರಸ್ತಿ ಮಾಡಿಸಲು ಆಗುತ್ತಿಲ್ಲ. ಅವುಗಳನ್ನು ತಂದು ದಡಕ್ಕೆ ಇಡಲೂ ಕಷ್ಟ. ಇಳಿತವಿದ್ದಾಗ ಹೂಳಿನಲ್ಲಿ ಸಿಲುಕುವ ದೋಣಿಗಳ ಮೇಲೆ ಕಪ್ಪೆಚಿಪ್ಪುಗಳು ಬೆಳೆಯುತ್ತವೆ. ಇದರಿಂದ ದೋಣಿಗಳಿಗೆ ಹಾನಿಯುಂಟಾಗುತ್ತಿದೆ’ ಎಂದು ದೋಣಿ ಮಾಲೀಕರೊಬ್ಬರು ಹೇಳಿದರು.

ಮರಳು ಗಣಿಗಾರಿಕೆಗೆ ಅನುಮತಿ ನೀಡಿದರೆ ನೂರಾರು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ದಾರಿಯಾಗುವ ಜತೆಗೆ ನಿರ್ಮಾಣ ಕ್ಷೇತ್ರಕ್ಕೂ ಅನುಕೂಲವಾಗುತ್ತದೆ
- ಅರವಿಂದ ಕಲ್ಗುಟ್ಕರ್, ಮರಳು ಗುತ್ತಿಗೆದಾರ ಸಂಘದ ಪದಾಧಿಕಾರಿ
ಕೇಂದ್ರದ ಮಟ್ಟದಲ್ಲಿ ಪ್ರಯತ್ನ
‘ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿಯೂ ಮರಳು ಗಣಿಗಾರಿಕೆ ನಡೆಸದಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದ್ದರೂ ಮರಳು ದಿಬ್ಬ ತೆರವುಗೊಳಿಸಲು ಮಾತ್ರ ಅನುಮತಿಸಿದೆ. ಆದರೆ ಮರಳು ಗಣಿಗಾರಿಕೆಗೆ ಅಧಿಕೃತವಾಗಿ ಅವಕಾಶ ಕಲ್ಪಿಸುವಂತೆ ಕೇಂದ್ರದ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದೇವೆ. ಮರಳು ಗಣಿಗಾರಿಕೆ ಸ್ಥಗಿತದಿಂದ ನೂರಾರು ಕುಟುಂಬಗಳಿಗೆ ಎದುರಾಗಿರುವ ಆರ್ಥಿಕ ಸಂಕಷ್ಟದ ಸಮಸ್ಯೆಯ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ’ ಎಂದು ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿಗಂಬರ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.