ಭಟ್ಕಳ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಕ್ಲಿನಿಕ್‍ಗಳನ್ನು ತೆರೆದು, ರೋಗಿಗಳಿಗೆ ಉಪಚರಿಸುತ್ತಿರುವ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಕುರಿತು ದೂರು ವ್ಯಾಪಕವಾಗಿದೆ.
ಜಾಲಿ, ಸರ್ಪನಕಟ್ಟೆ, ಹೆಬಳೆ, ಶಿರಾಲಿ, ಮುರುಡೇಶ್ವರ ಸೇರಿದಂತೆ ಹಲವು ಕಡೆ ಆರೋಗ್ಯ ಇಲಾಖೆ ನಿಯಮ ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‍ಗಳ ಮೇಲೆ ಜನರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
‘ಸಾಮಾನ್ಯ ಕಾಯಿಲೆಗಳ ತಪಾಸಣೆಗೆ ಬರುವ ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಾದ ಮಾತ್ರೆ, ಇಂಜೆಕ್ಷನ್ ನೀಡಿ ಅವರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಇನ್ನಷ್ಟು ಅನಾರೋಗ್ಯ ಪೀಡಿತರನ್ನಾಗಿ ಮಾಡುವ ಕೆಲಸ ನಕಲಿ ವೈದ್ಯರಿಂದ ನಡೆದಿದೆ. ವೈದ್ಯಕೀಯ ಶಿಕ್ಷಣ ಪಡೆಯದೆ ಕೆಲವು ಕೋರ್ಸುಗಳನ್ನು ಓದಿಕೊಂಡು ಕ್ಲಿನಿಕ್ ತೆರೆದವರೂ ಇದ್ದಾರೆ. ಅಧಿಕೃತವಲ್ಲದ ಕೆಲವು ಕ್ಲಿನಿಕ್‍ಗಳಲ್ಲಿ ಒಳರೋಗಿಗಳಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವ ಕೆಲಸವೂ ನಡೆಯುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ದೂರಿದರು.
‘ಕ್ಲಿನಿಕ್ ತೆರೆಯಲು ಕರ್ನಾಟಕ ಖಾಸಗಿ ವೈದಕೀಯ ಸಂಸ್ಥೆ (ಕೆ.ಪಿ.ಎಂ.ಇ) ಕಾಯ್ದೆ ಅಡಿ ಕಡ್ಡಾಯವಾಗಿ ನೋಂದಣಿ ಹೊಂದಿರಬೇಕು. ಅವರ ವೈದ್ಯಕೀಯ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಹೊರ ರೋಗಿ ಹಾಗೂ ಒಳರೋಗಿ ಕ್ಲಿನಿಕ್ ತೆರೆದು ರೋಗಿಗಳನ್ನು ಉಪಚರಿಸಬಹುದಾಗಿದೆ. ವೈದ್ಯರು ನೋಂದಣಿ ಪತ್ರವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಕ್ಲಿನಿಕ್‌ನಲ್ಲಿ ಅಂಟಿಸಿ ಪ್ರದರ್ಶಿಸಬೇಕಾಗುತ್ತದೆ. ಆದರೆ ಭಟ್ಕಳದಲ್ಲಿ ಹಲವು ಕಡೆ ನೋಂದಣಿಯಾಗದ ವೈದ್ಯರು ಔಷಧಿ ಸಲಹೆ ನೀಡುತ್ತಿದ್ದು, ಇದು ನೈಜ ವೈದ್ಯರ ವಿಶ್ವಾಸಾರ್ಹತೆಯನ್ನೂ ಜನರು ಪ್ರಶ್ನಿಸುವಂತಾಗುತ್ತಿದೆ’ ಎಂದರು.
‘ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ನಕಲಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿರುವ ಶಂಕೆ ಇದೆ. ಹಲವು ಕ್ಲಿನಿಕ್‍ಗಳಿಗೆ ಈ ಹಿಂದೆಯೆ ನೊಟೀಸ್ ನೀಡಲಾಗಿದ್ದರೂ ಈವರೆಗೆ ಯಾವುದೇ ಗಂಭೀರ ಕ್ರಮವಾಗಿಲ್ಲ’ ಎಂದೂ ದೂರಿದರು.
‘ನಕಲಿ ವೈದ್ಯರು ನೀಡುವ ಔಷಧಿಯ ಅಡ್ಡ ಪರಿಣಾಮವನ್ನು ಅನೇಕರು ಅನುಭವಿಸಿದ್ದಾರೆ. ನಕಲಿ ವೈದ್ಯರಿಂದ ಔಷಧಿ ಪಡೆದ ಅನೇಕ ರೋಗಿಗಳು ಕಿಡ್ನಿ, ದೇಹದ ಅಂಗಾಂಗ ಕಳೆದುಕೊಂಡಿದ್ದಾರೆ. ವೈದ್ಯರಲ್ಲದವರೂ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಆರೋಗ್ಯ ಇಲಾಖೆ ಅಂತಹ ಕ್ಲಿನಿಕ್‍ಗಳ ಮುಚ್ಚಿಸಲು ಕ್ರಮವಹಿಸಿಲ್ಲ’ ಎನ್ನುತ್ತಾರೆ ಪಟ್ಟಣದ ರಾಘವೇಂದ್ರ ನಾಯ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.