ಕುಮಟಾ: ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆ ಇರುವ ಗುಡ್ಡಗಳ ಮೇಲೆ ಅಶ್ವತ, ಅತ್ತಿ, ಆಲ, ಕಾಡು ರುದ್ರಾಕ್ಷಿಯಂಥ ಉದ್ದಗಲಕ್ಕೆ ಬೇರು ಬೆಳೆಯುವ ಮಳೆಕಾಡು ಮರಗಳನ್ನು ಬೆಳೆಸಿದರೆ ಹೆಚ್ಚಿನ ಅಪಾಯ ತಡೆಯಲು ಸಾಧ್ಯ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಎಂ.ಡಿ ಸುಭಾಶ್ಚಂದ್ರನ್ ಹೇಳಿದರು.
ತಾಲ್ಲೂಕಿನ ಹಿರೇಗುತ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಭಾರತೀಯ ವಿಜ್ಞಾನ ಸಂಸ್ಥೆ, ಐಕ್ಯ ಸರ್ಕಾರೇತರ ಸಂಸ್ಥೆ ಹಾಗೂ ಇತರೆ ಪರಿಸರ ಆಸಕ್ತ ರಕ್ಷಣೆ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಶಿಕ್ಷಣ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
‘ಬಯೋ ಎಂಜಿನಿಯರಿಂಗ್ ಪ್ರಕಾರ ಕುಸಿಯುವ ಸಾಧ್ಯತೆ ಇರುವ ಗುಡ್ಡಗಳ ಮೇಲೆ ಹಲಗೆ ಬೇರು, ಬಲೆಯಂತಹ ಬೇರು ಬೆಳೆಯುವ ಕಾಡು ರುದ್ರಾಕ್ಷಿ, ಅತ್ತಿ, ಆಲದಂಥ ನೈಸರ್ಗಿಕ ಗಿಡಗಳನ್ನು ಬೆಳೆಸಿದರೆ ಕ್ರಮೇಣ ಅವುಗಳ ಬೇರು ಮಣ್ಣು ಕುಸಿಯದಂತೆ ತಡೆಯುವ ನೈಸರ್ಗಿಕ ಬೃಹತ್ ಜಾಲ ನಿರ್ಮಾಣವಾಗುತ್ತವೆ. ಇಂತಹ ಶಾಶ್ವತ ಯೋಜನೆಗಳನ್ನು ಕೈಕೊಳ್ಳದಿದ್ದರೆ ನಮ್ಮ ಸುತ್ತಲೂ ಇನ್ನೂ ಮುಂದೆ ಶಿರೂರು, ವಯನಾಡ್ ನಂಥ ದುರಂತಗಳು ಮರುಕಳಿಸಬಹುದು’ ಎಂದರು.
ಹಿಂದೆ ಬ್ರಿಟಿಷರು ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಮೆದು ಮಳೆಕಾಡು ಮರಗಳನ್ನು ಕಡಿದು ಆದಾಯ ತರುವ ಸಾಗುವಾನಿ ಮರ ಬೆಳೆಸುವ ಕ್ರಮ ಕೈಕೊಂಡಿದ್ದರು. ಸ್ವಾತಂತ್ರ್ಯ ನಂತರ ನಮ್ಮ ಸರ್ಕಾರ ಕೂಡ ಮೆದು ಮರಗಳನ್ನು ಉದ್ಯಮಿಗಳಗೆ ಟನ್‌ಗೆ ₹ 1ನಂತೆ ಮಾರಾಟ ಮಾಡಿ ಭವಿಷ್ಯದಲ್ಲಿ ನೈಸರ್ಗಿಕ ಪ್ರಕೋಪಗಳಿಗೆ ದಾರಿ ಮಾಡಿತು ಎಂದರು.
ವಿಷಯುಕ್ತ ಹಾವುಗಳ ಬಗ್ಗೆ ಮಾತನಾಡಿದ ಹಿರೇಗುತ್ತಿ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಸಿ.ಆರ್.ನಾಯ್ಕ, ‘ರೈತ ಸ್ನೇಹಿಯಾದ ಹಾವುಗಳನ್ನು ಕೊಲ್ಲುವ ಬದಲು ಅವು ವಸತಿ ಪ್ರದೇಶದತ್ತ ಬಾರದಂತೆ ಎಚ್ಚರ ವಹಿಸಬೇಕು. ವಿಷಯುಕ್ತ ಹಾವುಗಳ ಬಗ್ಗೆ ತಿಳಿವಳಿಕೆ ಹೊಂದಿದರೆ ಅವುಗಳಿಂದ ಉಂಟಾಗುವ ಅಪಾಯದಿಂದ ಪಾರಾಗಬಹುದು’ ಎಂದರು.
ಪ್ರಾಚಾರ್ಯ ರಾಜೀವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಉಪನ್ಯಾಸಕಿ ನೇತ್ರಾವತಿ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ಸುಜಾತಾ ನಾಯಕ ವಂದಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಗಾಯತ್ರಿ ನಾಯ್ಕ, ವಿಷ್ಣು ಮುಕ್ರಿ, ಶ್ರೀಕಾಂತ ನಾಯ್ಕ, ಅರಣ್ಯ ಪಾಲಕ ಬಸವನ ಗೌಡ ಬಗಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.