ಕಾರವಾರ: ಮಾನ್ಸೂನ್ ಅವಧಿಯಲ್ಲಿ ಕಡಲು ಕೊರೆತದ ಸಮಸ್ಯೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಹಾನಿ ಪ್ರಮಾಣ ಏರಿಕೆಯಾಗುತ್ತಿರುವುದು ಜನರಲ್ಲಿ ಕಳವಳ ಹೆಚ್ಚಿಸಿದೆ.
ಪ್ರವಾಸೋದ್ಯಮ ಚಟುವಟಿಕೆ ಈಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಗರಿಗೆದರಿದೆ. ಅದರ ಪರಿಣಾಮವಾಗಿ ಕಡಲತೀರದಲ್ಲಿ ಕೋಟ್ಯಂತರ ವೆಚ್ಚದಲ್ಲಿ ಪ್ರವಾಸಿಗರನ್ನು ಸೆಳೆಯುವ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ. ಈ ಮೊದಲು ಕಡಲು ಕೊರೆತದಿಂದ ಮೀನುಗಾರರ ಮನೆಗಳು, ಕಡಲತೀರದಲ್ಲಿ ಅವರು ಇಟ್ಟ ಪರಿಕರಗಳಿಗೆ ಹಾನಿ ಉಂಟಾಗುತ್ತಿತ್ತು. ಆದರೆ, ಈಗ ಪ್ರವಾಸೋದ್ಯಮ ವ್ಯವಸ್ಥೆಯೇ ಬುಡಮೇಲಾಗುವ ಸನ್ನಿವೇಶ ಉಂಟಾಗುತ್ತಿದೆ.
ಕಾರವಾರದಲ್ಲಿ ರಾಕ್ ಗಾರ್ಡನ್ ಗೋಕರ್ಣದಲ್ಲಿ ರೆಸಾರ್ಟ್, ಹೋಮ್ ಸ್ಟೇಗಳು, ಹೊನ್ನಾವರದ ಇಕೋ ಬೀಚ್, ಮುರ್ಡೇಶ್ವರ ಕಡಲತೀರ ಹೀಗೆ ಹಲವು ಪ್ರವಾಸಿ ತಾಣಗಳಿಗೆ ಕಡಲು ಕೊರೆತದ ಸಮಸ್ಯೆಯ ಬಿಸಿ ತಟ್ಟುತ್ತಿದೆ.
ಕಡಲು ಕೊರೆತ ತಡೆಗೆ ಸಮುದ್ರ ತೀರದಲ್ಲಿ ಬೃಹದಾಕಾರದ ಬಂಡೆಗಳ ರಾಶಿ ಇಟ್ಟು ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿದೆ. ಇದು ಮೀನುಗಾರಿಕೆ ಚಟುವಟಿಕೆಗೆ ಅಡ್ಡಿಯಾಗುತ್ತದೆ ಎಂದು ಮೀನುಗಾರರು ವಿರೋಧಿಸುವ ಪ್ರಸಂಗವೂ ಮುಂದುವರಿದಿದೆ. ಹೀಗಾಗಿ ಸಮಸ್ಯೆ ಇರುವ ಕಡೆ ಬಿಟ್ಟು ಬೇರೆ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಿದ ಪ್ರಸಂಗವೂ ನಡೆದಿದೆ.
ಕಾರವಾರ ತಾಲ್ಲೂಕಿನ ದೇವಬಾಗ, ಹಿಪ್ಪಳಿ, ದಾಂಡೇಬಾಗ, ಟ್ಯಾಗೋರ್ ಕಡಲತೀರ, ಅಂಕೋಲಾ ತಾಲ್ಲೂಕಿನ ಹಾರವಾಡ, ಬೆಳಂಬಾರ ಹಾಗೂ ಇತರ ಕಡಲತೀರಗಳಲ್ಲಿ 50 ಮೀ.ಗೂ ಹೆಚ್ಚಿನ ಪ್ರದೇಶ ಕಡಲಕೊರೆತಕ್ಕೆ ಹಾನಿಗೀಡಾಗುತ್ತಿದೆ.
‘ದೇವಬಾಗದಿಂದ ಮಾಜಾಳಿ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ಅಲೆ ತಡೆಗೋಡೆ ನಿರ್ಮಿಸಲಾಗಿದ್ದರೂ ಪ್ರತಿ ಬಾರಿ ಕಡಲು ಕೊರೆತಕ್ಕೆ ರಸ್ತೆ ಹಾನಿಗೀಡಾಗುತ್ತಿದೆ. ಸಮೀಪದ ಮನೆಗಳ ನಿವಾಸಿಗಳು ಆತಂಕದಲ್ಲೇ ಮಳೆಗಾಲ ಕಳೆಯುತ್ತೇವೆ’ ಎಂದು ಹಿಪ್ಪಳಿ ಗ್ರಾಮದ ವಿನೋದ ಸೈಲ್ ಹೇಳುತ್ತಾರೆ.
ಗೋಕರ್ಣ: 450 ಮೀ. ಅಲೆ ತಡೆಗೋಡೆ
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ರುದ್ರಪಾದದ ಬಳಿ, ಶಾಸಕ ದಿನಕರ ಶೆಟ್ಟಿ ಅವರ ಪ್ರಯತ್ನದಿಂದ ₹ 5 ಕೋಟಿ ಅನುದಾನದಲ್ಲಿ ಸಮುದ್ರ ಕೊರೆತದ ತಡೆಗೋಡೆ ನಿರ್ಮಾಣಗೊಂಡಿದೆ. ಆದರೆ ನಾಡುಮಾಸ್ಕೇರಿ ಭಾಗದ ಕೆಲವೆಡೆ ಕಡಲು ಕೊರೆತದ ಸಮಸ್ಯೆ ಮುಂದುವರಿದಿದೆ.
ಕಡಲುಕೊರೆತ ಸಮಸ್ಯೆ ನಿಯಂತ್ರಣಕ್ಕೆ ಸೂಕ್ತ ಮಾರ್ಗೋಪಾಯ ಕಂಡುಹಿಡಿಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡಲು ಕೊರೆತದ ಸಮಸ್ಯೆ ಉಂಟಾದಲ್ಲಿ ತಕ್ಷಣ ಅನುದಾನ ನೀಡಿ ತುರ್ತು ಕ್ರಮ ಕೈಗೊಳ್ಳಲಾಗುತ್ತದೆ.ಮಂಕಾಳ ವೈದ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ
ರುದ್ರಪಾದದ ಸುತ್ತಮುತ್ತಲೂ ಸುಮಾರು 300 ಎಕರೆಗಳಷ್ಟು ಕೃಷಿ ಭೂಮಿಯಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಮುದ್ರದ ಕೊರೆತದಿಂದ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುತ್ತಿತ್ತು. ಇದರಿಂದ ರೈತರ ಬೆಳೆಗಳಿಗೆ ಅಪಾರ ಹಾನಿ ಸಂಭವಿಸುತ್ತಿತ್ತು. ಸಮುದ್ರದ ಉಪ್ಪು ನೀರು ಗದ್ದೆಗೆ ನುಗ್ಗದಂತೆ 450 ಮೀ.ಗಳಷ್ಟು ಉದ್ದದ ತಡೆಗೋಡೆ ನಿರ್ಮಿಸಲಾಗಿದೆ.
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಸ್ಥಳದಲ್ಲಿ ಸಮುದ್ರ ಕೊರೆತದ ತಡೆಗೋಡೆ ನಿರ್ಮಾಣವಾಗಬೇಕಿದೆ. ಅಲ್ಲಿಯ ರೈತರು ಪ್ರತಿ ವರ್ಷ ಮಳೆಗಾಲದಲ್ಲಿ ಸಮುದ್ರದ ನೀರು ಭತ್ತದ ಭೂಮಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕುಮಟಾ: ಬಿಡುಗಡೆಯಾಗದ ಅನುದಾನ
ಕುಮಟಾ ತಾಲ್ಲೂಕಿನ ಧಾರೇಶ್ವರ, ಹಂದಿಗೋಣ ಹಾಗೂ ಕಲಭಾಗದಲ್ಲಿ ಸಮುದ್ರ ಕೊರೆತ ಅಲೆ ತಡೆಗೋಡೆ ನಿರ್ಮಾಣಕ್ಕೆ ಕಳೆದ ವರ್ಷ ಬಂದರು ಇಲಾಖೆ ಪ್ರಸ್ತಾವ ಕಳಿಸಿದ್ದು, ಇದುವರೆಗೂ ಹಣ ಮಂಜೂರಾಗಿ ಬಂದಿಲ್ಲ.
ಈ ಬಾರಿ ಕಡಲು ಕೊರೆತ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ಸಂಬಂಧ ಇಲಾಖೆಯಿಂದ ₹ 5 ಕೋಟಿ ಪ್ರಸ್ತಾವ ಸಲ್ಲಿಕೆಯಾಗಿದೆ. ತುರ್ತು ಕಾಮಗಾರಿ ಕೈಗೊಳ್ಳಲು ಕೆಟಿಟಿಪಿ ಕಾಯ್ದೆಯಿಂದ ವಿನಾಯಿತಿ ನೀಡಲು ಕೋರಲಾಗಿದೆ.ಟಿ.ಎಸ್. ರಾಠೋಡ್ ಬಂದರು ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್
‘2020 ರಲ್ಲಿ ಗೋಕರ್ಣ ಸಮೀಪದ ದುಬ್ಬನಸಸಿ ಬಳಿ ಅಲೆ ತಡೆ ಗೋಡೆ ನಿರ್ಮಾಣಕ್ಕೆ ಮುಂದಾದಾಗ ಮೀನುಗಾರಿಕೆಗೆ ತೊಂದರೆ ಉಂಟಾಗುತ್ತದೆ ಎಂದು ಸ್ಥಳೀಯರು ಪ್ರತಿಭಟಿಸಿದ್ದರಿಂದ ಕಾಮಗಾರಿಯನ್ನು ಸಮೀಪದ ಗಂಗೆಕೊಳ್ಳದಲ್ಲಿ ನಡೆಸಲಾಯಿತು. ತದಡಿ ಸಮೀಪದ ಬೇಲೆಕಾನ ಬಳಿ ಕುಸಿದ ಹಳೆಯ ಅಲೆ ತಡೆ ಗೋಡೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್.ಡಿ.ಆರ್.ಎಫ್) ಬಳಸಿ ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ’ ಎಂದು ಬಂದರು ಇಲಾಖೆಯ ಸಹಾಯಕ ಎಂಜಿನಿಯರ್ ಅನಂತ ಪಟಗಾರ ತಿಳಿಸಿದರು.
ಹೊನ್ನಾವರ: ಮನವಿ, ಪ್ರಸ್ತಾವಕ್ಕೆ ಸೀಮಿತವಾದ ತಡೆಗೋಡೆ ನಿರ್ಮಾಣ
ಹೊನ್ನಾವರ ತಾಲ್ಲೂಕಿನ ವಿವಿಧ ಭಾಗಗಳ ಸಮುದ್ರ ತೀರದಲ್ಲಿ ಉಂಟಾಗಿರುವ ಕೊರೆತವನ್ನು ನಿಯಂತ್ರಿಸಲು ತಡೆಗೋಡೆ ನಿರ್ಮಿಸಬೇಕೆಂದು ಜನರು ಮನವಿ ಸಲ್ಲಿಸುತ್ತಲೇ ಇದ್ದಾರೆ.
ಕರ್ಕಿ ಪಂಚಾಯಿತಿ ವ್ಯಾಪ್ತಿಯ ತೊಪ್ಪಲಕೇರಿ, ಹೆಗಡೆಹಿತ್ಲು ಹಾಗೂ ಪಾವಿನಕುರ್ವದಲ್ಲಿ ಸಮುದ್ರ ಕೊರೆತದ ಪರಿಣಾಮ ಗಂಭೀರವಾಗಿದೆ. ಕಾಸರಕೋಡಿನ ಇಕೋ ಬೀಚ್‌ನಲ್ಲಿ ನಿರ್ಮಿಸಿದ್ದ ರಸ್ತೆ ಕಳೆದ ಮಳೆಗಾಲದಲ್ಲಿ ಸಮುದ್ರ ಕೊರೆತಕ್ಕೆ ಆಹುತಿಯಾಗಿದೆ. ಮಂಕಿ ಭಾಗದಲ್ಲೂ ಸಮುದ್ರ ಕೊರೆತದ ಪರಿಣಾಮಗಳು ಕಂಡು ಬಂದಿವೆ. ಪಾವಿನಕುರ್ವ ಸಮೀಪದ ಕೆಸರಕೋಡಿ ಎಂಬ ಕಂದಾಯ ಗ್ರಾಮ ಸಮುದ್ರ ಕೊರೆತಕ್ಕೆ ತುತ್ತಾಗಿ ಈಗಾಗಲೇ ಸಮುದ್ರದ ಒಡಲನ್ನು ಸೇರಿದೆ.
ಸಮುದ್ರ ಕೊರೆತದ ಹಾನಿ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದೇವೆ.ಹರಿಶ್ಚಂದರ ನಾಯ್ಕ, ಕರ್ಕಿ ಗ್ರಾಮ ಪಂಚಾಯಿತಿ ಸದಸ್ಯ
ಕರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ 10–15 ಮನೆಗಳ ಜನರನ್ನು ಸ್ಥಳಾಂತರ ಮಾಡಲಾಗುತ್ತದೆ. ತೊಪ್ಪಲಕೇರಿಯಲ್ಲಿ ಸಮುದ್ರಕೊರೆತ ಉಂಟಾಗಿರುವ 1,310 ಮೀ. ಉದ್ದದ ತೀರದ ಪೈಕಿ 750 ಮೀ. ಉದ್ದದ ಜಾಗಕ್ಕೆ ತಡೆಗೋಡೆ ನಿರ್ಮಿಸಲು ಎಡಿಬಿ ಯೋಜನೆಯಡಿ ಮಾರ್ಚ್‍ನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ.
‘ತೊಪ್ಪಲಕೇರಿ ಮತ್ತಿತರ ಸಮುದ್ರ ತೀರಗಳ ಕೊರೆತ ತಡೆಗಟ್ಟುವ ಕಾಮಗಾರಿಗೆ 2017 ರಿಂದ ಪ್ರಸ್ತಾವ ಸಲ್ಲಿಸುತ್ತ ಬಂದಿದ್ದು ಈಚಿನ ವರ್ಷಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಬಂದರು ಇಲಾಖೆಯ ಸಹಾಯಕ ಎಂಜಿನಿಯರ್ ಸುಜಾತಾ ತಿಳಿಸಿದರು.
ಭಟ್ಕಳ: ನಿಷ್ಪ್ರಯೋಜಕವಾದ ಅಲೆ ತಡೆಗೋಡೆ
ಭಟ್ಕಳ ತಾಲ್ಲೂಕಿನಲ್ಲಿ ಸಮುದ್ರ ತೀರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕಡಲು ಕೊರೆತ ಸಾಮಾನ್ಯವಾಗಿದೆ. ಅದರ ನಿಯಂತ್ರಣಕ್ಕೆ ಶಿಲೆಕಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಪ್ರತಿವರ್ಷ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಿಂದ ಕೋಟಿ ಅನುದಾನ ನೀಡಿ ಕಾಮಗಾರಿ ಮಾಡುತ್ತಿದ್ದರೂ ಅದು ಸಮಸ್ಯೆ ತಡೆಯುತ್ತಿಲ್ಲ.
ಕಡಲ ತೀರದಲ್ಲಿ ವಾಸಿಸುವ ಮೀನುಗಾರರು ಪ್ರತಿ ವರ್ಷ ಕಡಲ್ಕೊರೆತದಿಂದ ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ಬಾರಿ ಹಾನಿ ಉಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ.ವೆಂಕಟ್ರಮಣ ಮೊಗೇರ, ಮುಂಡಳ್ಳಿ ಗ್ರಾಮಸ್ಥ
ತಾಲ್ಲೂಕಿನ ಗೋರ್ಟೆ, ಬೆಳ್ಕೆ, ತಲಗೋಡ, ತೆಂಗಿನಗುಂಡಿ, ಅಳ್ವೇಕೋಡಿ, ಮುರುಡೇಶ್ವರ ಹಾಗೂ ಬೈಲೂರು ಭಾಗಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಕಡಲ್ಕೊರೆತ ಸಂಭವಿಸಿ ಉಪ್ಪು ನೀರು ಕೃಷಿ ಭೂಮಿಗಳಿಗೆ ನುಗ್ಗಿ ಫಸಲು ನಾಶವಾಗುತ್ತಿದೆ. ಕಡಲಿನ ಅಂಚಿನಲ್ಲಿರುವ ತೆಂಗಿನ ತೋಟಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದು, ಪ್ರತಿ ವರ್ಷ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಅಲೆ ತಡೆಗೋಡೆ ನಿರ್ಮಾಣವೇ ಅವೈಜ್ಞಾನಿಕ
‘ಕಡಲು ಕೊರೆತ ಮಳೆಗಾಲದ ವೇಳೆ ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ. ಅದನ್ನು ತಡೆಗಟ್ಟಲು ಯಾವುದೇ ಮಾರ್ಗೋಪಾಯ ಇಲ್ಲ. ಕಡಲು ಕೊರೆತ ನಿಯಂತ್ರಿಸುತ್ತೇವೆ ಎಂಬ ಕಲ್ಪನೆಯಿಂದ ಕಡಲತೀರಗಳಲ್ಲಿ ಬಂಡೆಕಲ್ಲುಗಳ ರಾಶಿ ಸುರಿದು ಅಲೆ ತಡೆಗೋಡೆ ನಿರ್ಮಿಸುವ ಪ್ರಕ್ರಿಯೆಯೂ ಅವೈಜ್ಞಾನಿಕ’ ಎಂದು ಕಡಲಜೀವ ಶಾಸ್ತ್ರಜ್ಞ ಡಾ.ವಿ.ಎನ್.ನಾಯಕ ಅಭಿಪ್ರಾಯಪಡುತ್ತಾರೆ.
‘ಸಿ.ಆರ್.ಝಡ್ ನಿಯಮಗಳ ಪಾಲನೆ ಬಿಗು ಕ್ರಮಗಳ ಮೂಲಕ ಕಡಲತೀರದ ಅಂಚಿನಲ್ಲಿ ಕಟ್ಟಡಗಳ ನಿರ್ಮಾಣ ಇನ್ನಿತರ ಅಭಿವೃದ್ಧಿ ಚಟುವಟಿಕೆ ತಡೆಯುವುದರಿಂದ ಕಡಲು ಕೊರೆತದಿಂದ ಉಂಟಾಗಬಹುದಾದ ಹಾನಿ ತಡೆಗಟ್ಟಬಹುದೇ ವಿನಾ ಕಡಲು ಕೊರೆತ ಸಮಸ್ಯೆ ತಡೆಹಿಡಿಯಲು ಆಗದು. ಕಡಲತೀರದಲ್ಲಿ ಹಸಿರಾಗಿ ಹಬ್ಬಿರುವ ಬೀಚ್ ಮಾರ್ನಿಂಗ್ ಗ್ಲೋರಿ ಬಳ್ಳಿಗಳನ್ನು ಕಿತ್ತೆಸೆಯದೇ ಅವುಗಳನ್ನು ಬೆಳೆಯಲು ಬಿಟ್ಟರೆ ಮರಳಿನ ಸವಕಳಿ ಪ್ರಮಾಣ ಅದು ತಡೆಯಬಲ್ಲದು’ ಎಂದೂ ಅವರು ಹೇಳುತ್ತಾರೆ.
ಕಡಲಕೊರೆತ ಸಂಭವಿಸಬಹುದಾದ ಸ್ಥಳಗಳು
ಕಾರವಾರದ ಟ್ಯಾಗೋರ್ ಕಡಲತೀರದಿಂದ ದೇವಬಾಗ ದೇವಬಾಗದಿಂದ ಮಾಜಾಳಿವರೆಗೆ.
ಅಂಕೋಲಾ ತಾಲ್ಲೂಕಿನ ಹಾರವಾಡದಿಂದ ಬೆಳಂಬಾರವರೆಗೆ.
ಕುಮಟಾ ತಾಲ್ಲೂಕಿನ ಧಾರೇಶ್ವರದಿಂದ ಕಲಭಾಗ ಕಡ್ಲೆಯಿಂದ ಬಾಡವರೆಗೆ.
ಹೊನ್ನಾವರ ತಾಲ್ಲೂಕಿನ ಮಾವಿನಕುರ್ವೆಯಿಂದ ತೊಪ್ಪಲಕೇರಿ ಮಂಕಿಯಿಂದ ಅಪ್ಸರಕೊಂಡ.
ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿಯಿಂದ ತಲಗೋಡ ಬೆಳಕೆಯಿಂದ ಗೋರಟೆವರೆಗೆ.
ಪ್ರಜಾವಾಣಿ ತಂಡ:
ಗಣಪತಿ ಹೆಗಡೆ, ರವಿ ಸೂರಿ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಎಂ.ಜಿ.ನಾಯ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.