ADVERTISEMENT

ಉತ್ತರ ಕನ್ನಡ | ಮತ ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 30 ಮೇ 2024, 14:23 IST
Last Updated 30 ಮೇ 2024, 14:23 IST
   

ಕಾರವಾರ: ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವ ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ತೆರೆದಿರುವ ಮತ ಎಣಿಕೆ ಕೇಂದ್ರದ ಸುತ್ತ ಜೂನ್ 4 ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದಾರೆ.

‘ಮತ ಎಣಿಕೆ ಕಾರ್ಯವನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಮತ ಎಣಿಕೆಯ ನಂತರ, ಫಲಿತಾಂಶದ ಪ್ರಭಾವದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಗುಂಪಾಗಿ ವಿಜಯೋತ್ಸವಗಳನ್ನು ಆಚರಿಸಲು ಅವಕಾಶ ನೀಡಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಗಳಿರುವ ಕಾರಣ ಕೇಂದ್ರದ 200 ಮೀ. ಸುತ್ತಮುತ್ತ ಜೂನ್ 4ರ ಬೆಳಿಗ್ಗೆಯಿಂದ ರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಮತ ಎಣಿಕೆ ಕೇಂದ್ರದ ಆವರಣದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಪಾದಚಾರಿ ವಲಯ ಎಂದು ಗುರುತಿಸಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ವಾಹನಗಳಿಗೆ ಪ್ರವೇಶ ಮತ್ತು ಪಾರ್ಕಿಂಗ್ ಮಾಡಲು ಅವಕಾಶ ಇಲ್ಲ. ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್, ಕಾರ್ಡ್‌ಲೆಸ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಚುನಾವಣೆಯ ಮತ ಎಣಿಕೆ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.