ADVERTISEMENT

ಭಟ್ಕಳ | ಪಡಿತರ ವಿತರಣೆಗೆ ಸರ್ವರ್ ಸಂಕಟ

ಬೆರಳಚ್ಚು ಪಡೆಯಲು ನ್ಯಾಯಬೆಲೆ ಅಂಗಡಿಕಾರರ ಹರಸಾಹಸ

ಮೋಹನ ನಾಯ್ಕ
Published 22 ಅಕ್ಟೋಬರ್ 2024, 5:46 IST
Last Updated 22 ಅಕ್ಟೋಬರ್ 2024, 5:46 IST
ತಾಲ್ಲೂಕಿನ ಗ್ರಾಮೀಣ ಬಾಗದಲಿ ರೇಷನ್‌ ಪಡೆಯಲು ರೇಷನ್‌ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿರುವುದು
ತಾಲ್ಲೂಕಿನ ಗ್ರಾಮೀಣ ಬಾಗದಲಿ ರೇಷನ್‌ ಪಡೆಯಲು ರೇಷನ್‌ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿರುವುದು   

ಭಟ್ಕಳ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆಯ ಕಾರಣದಿಂದಾಗಿ ತಾಲ್ಲೂಕಿನಲ್ಲಿ ತಿಂಗಳ ಪಡಿತರ ಪಡೆಯಲು ಜನರು ದಿನಗಟ್ಟಲೇ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿ ಎದುರು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ 34 ನ್ಯಾಯಬೆಲೆ ಅಂಗಡಿಗಳು ಇದ್ದು, ಅಂದಾಜು 29 ಸಾವಿರ ಬಿಪಿಎಲ್ ಕುಟುಂಬಗಳಿವೆ. ಪ್ರತಿ ತಿಂಗಳ ಮೊದಲ ವಾರದಲ್ಲೆ ಪಡಿತರ ಹಂಚಿಕೆ ಆರಂಭಿಸಿ ತಿಂಗಳ ಮೂರನೇ ವಾರದಲ್ಲಿ ವಿತರಣೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ಅಡ್ಡಿ ಉಂಟಾಗಿದೆ ಎಂಬ ದೂರುಗಳಿವೆ.

‘ಅ.18ರಿಂದ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಆದೇಶಿಸಲಾಗಿದೆ. ಆದರೆ, ವಿತರಣೆಗೆ ಸರ್ವರ್ ಸಮಸ್ಯೆ ಕಾಡುತ್ತಿದೆ’ ಎಂಬುದಾಗಿ ಬಹುತೇಕ ನ್ಯಾಯಬೆಲೆ ಅಂಗಡಿಕಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ದೀಪಾವಳಿ ಹಬ್ಬದ ಸಮಯದಲ್ಲಿ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ದಿನವಿಡೀ ನಿಲ್ಲುವಂತೆ ಆಗಿದೆ. ಬೆರಳಚ್ಚು ಪಡೆಯದೆ ಪಡಿತರ ನೀಡುವುದಿಲ್ಲ. ಸರ್ವರ್ ಸಮಸ್ಯೆಯಿಂದ ಬೆರಳಚ್ಚು ಪಡೆಯಲಾಗದೆ ಪಡಿತರ ವಿತರಕರು ಕಾಯಿಸುತ್ತಿದ್ದಾರೆ. ಇನ್ನು 9 ದಿನದಲ್ಲಿ ತಿಂಗಳು ಅಂತ್ಯವಾಗಲಿದ್ದು, ಅದರೊಳಗೆ ಪಡಿತರ ಪಡೆಯದಿದ್ದರೆ ಈ ತಿಂಗಳ ಪಡಿತರದಿಂದ ವಂಚಿರಾಗಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪಟ್ಟಣದ ಮಾದೇವ ನಾಯ್ಕ.

‘ಸರ್ವರ್ ಸಮಸ್ಯೆ ಸರಿಪಡಿಸಲಾಗದಿದ್ದರೆ ಬೆರಳಚ್ಚಿನ ಬದಲಾಗಿ ರಶೀದಿ ನೀಡಿ ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ರಮವಹಿಸಲಿ’ ಎಂದೂ ಅವರು ಆಗ್ರಹಿಸಿದರು.

‘ಈ ಹಿಂದೆ ಎನ್.ಐ.ಸಿ ಯಲ್ಲಿದ್ದ ಪಡಿತರ ಸರ್ವರ್ ಅನ್ನು ಕೆ.ಎಸ್.ಡಿ.ಸಿ ಗೆ ಸಮ್ಮಿಲನಗೊಳಿಸಲಾಗಿದೆ. ಸಮ್ಮಿಲನ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಸರ್ವರ್ ಸಮಸ್ಯೆ ಕಾಡುತ್ತಿದೆ. ಪರಿಣಿತರ ತಂಡ ಇದನ್ನು ಪರಿಶೀಲನೆ ನಡೆಸುತ್ತಿದ್ದು, ಇನ್ನೆರಡು ದಿನದಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ’ ಎಂದು ಆಹಾರ ನಿರೀಕ್ಷಕ ಶಶಿಧರ ಹೇಳಿದರು.

ಸಾರ್ವಜನಿಕರಿಗೆ ರಜಾ ದಿನದಲ್ಲೂ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಲಾಗಿದೆ
ಶಶಿಧರ ಆಹಾರ ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.