ಕುಮಟಾ: ತಾಲ್ಲೂಕಿನಾದ್ಯಂತ ಕಂದಾಯ ಇಲಾಖೆಯ ಕೆಳ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ಇಲಾಖೆಯಿಂದ ವಿವಿಧ ಪ್ರಮಾಣ ಪತ್ರ ಪಡೆಯುವ ಸಾರ್ವಜನಿಕರು ಪರದಾಡುವಂತಾಯಿತು.
ತಾಲ್ಲೂಕಿನಲ್ಲಿ ಒಟ್ಟೂ 36 ಗ್ರಾಮ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಪೈಕಿ ತಾಲ್ಲೂಕು ಕಚೇರಿಯ ಸಿಬ್ಬಂದಿ ವಿಭಾಗ, ಪ್ರಾಕೃತಿಕ ವಿಕೋಪ ವಿಭಾಗ, ನೆಮ್ಮದಿ ಕೇಂದ್ರ ವಿಭಾಗ, ದೇವಾಲಯ ಹಾಗೂ ಮುಜರಾಯಿ ವಿಭಾಗದಲ್ಲಿ ತಲಾ ಒಬ್ಬರು, ಭೂಮಿ ವಿಭಾಗದಲ್ಲಿ ಇಬ್ಬರು ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಉಳಿದ 27 ಗ್ರಾಮ ಆಡಳಿತಾಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
‘ಪಹಣಿ ಪತ್ರಿಕೆಗೆ ಆಧಾರ್ ಮಾಹಿತಿ ಜೋಡಣೆ, ಆದಾಯ, ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ತಮಗೆ ಬೇಕಾದ ದಾಖಲೆಗಳಿಗಾಗಿ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದ ಸಾರ್ವಜನಿಕರಿಗೆ ಈ ನಡುವೆ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ’ ಎಂದು ತಾಲ್ಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರವಿ ಹೆಗಡೆ ದೂರಿದರು.
‘ಆದಾಯ ಪ್ರಮಾಣ ಪತ್ರ ಸೇರಿ ವಿವಿಧ ಪ್ರಮಾಣ ಪತ್ರಗಳಿಗೆ ಆನ್‍ಲೈನ್ ಮೂಲಕ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಮೊಬೈಲ್ ಆ್ಯಪ್‌ನಲ್ಲಿ ಡೌನ್‍ಲೋಡ್ ಮಾಡಿ ಪರಿಶೀಲಿಸಿದ ನಂತರ ಅವುಗಳನ್ನು ಕಂದಾಯ ನಿರೀಕ್ಷಕರ ಲಾಗಿನ್‍ಗೆ ಕಳಿಸಬೇಕಿತ್ತು. ಅಲ್ಲಿಂದ ಮುಂದೆ ಅದು ತಹಶೀಲ್ದಾರ್ ಕಚೇರಿಗೆ ಹೋಗಿ ಸಾರ್ವಜನಿಕರಿಗೆ ಅಗತ್ಯ ಪ್ರಮಾಣ ಪತ್ರಗಳು ಸಿಗುತ್ತಿದ್ದವು. ಆದರೆ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್‍ಗಳನ್ನು ಸ್ಥಗಿತಗೊಳಿಸಿದ್ದರಿಂದ ವಾರಗಳ ಕಾಲದಿಂದ ಹಲವು ಅರ್ಜಿಗಳು ಬಾಕಿ ಉಳಿದುಕೊಂಡವು’ ಎಂದು ಗ್ರೇಡ್ -2 ತಹಶೀಲ್ದಾರ್ ಸತೀಶ ಗೌಡ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.