ADVERTISEMENT

ತಲೆಯ ಮೇಲೊಂದು ಸೂರು ಕೊಡಿ : ಜಿಲ್ಲಾಡಳಿತಕ್ಕೆ ಲೈಂಗಿಕ ಅಲ್ಪಸಂಖ್ಯಾತರ ಮನವಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 15:19 IST
Last Updated 25 ಆಗಸ್ಟ್ 2018, 15:19 IST
ಸರ್ಕಾರದ ಸೌಲಭ್ಯದ ನಿರೀಕ್ಷೆಯಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಾದ ಸ್ವರ್ಣಾ ಮತ್ತು ನಮಿತಾ
ಸರ್ಕಾರದ ಸೌಲಭ್ಯದ ನಿರೀಕ್ಷೆಯಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಾದ ಸ್ವರ್ಣಾ ಮತ್ತು ನಮಿತಾ   

ಕಾರವಾರ:‘ನಮಗೆ ಇರುವುದಕ್ಕೆ ಒಂದು ಸೂರು ಇಲ್ಲ. ಬಾಡಿಗೆಗೂಮನೆಯನ್ನು ಕೊಡುತ್ತಿಲ್ಲ. ನಾವೇನು ತಪ್ಪು ಮಾಡಿದ್ದೇವೆ? ನಾವೂ ಎಲ್ಲರ ಹಾಗೆ ಮನುಷ್ಯರಲ್ಲವೇ...’

ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಶನಿವಾರಹಮ್ಮಿಕೊಂಡಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ವರ್ಣಾ ಕಣ್ಣೀರಿಡುತ್ತಾ ಹೀಗೆ ಹೇಳಿದರು.

‘ಒಂಬತ್ತು ವರ್ಷಗಳಿಂದ ಹೊನ್ನಾವರ ಪಟ್ಟಣದಲ್ಲಿ ನಾನು ಮತ್ತು ನಮಿತಾ ಸಣ್ಣಪುಟ್ಟ ಕೆಲಸ, ಭಿಕ್ಷೆ ಬೇಡಿಕೊಂಡು ವಾಸ ಮಾಡುತ್ತಿದ್ದೇವೆ. ನಮಗೆ ಆರಂಭದಲ್ಲಿ ಮನೆ ಬಾಡಿಗೆಗೆ ಸಿಕ್ಕಿತ್ತು. ಆದರೆ, ಸುತ್ತಮುತ್ತಲಿನವರು ಇಂಥವರಿಗೆಲ್ಲ ಮನೆ ಬಾಡಿಗೆ ಕೊಡಬಾರದು ಎಂದು ಹೇಳಿದ್ದನ್ನು ಕೇಳಿದ ಮನೆ ಮಾಲೀಕರು ಮಳೆಗಾಲದಲ್ಲೇ ಖಾಲಿ ಮಾಡಿಸಿದರು. ನಾವು ಅಲ್ಲಿರಬಾರದು, ಇಲ್ಲಿರಬಾರದು ಎಂದು ಹೇಳಿದರೆ ಎಲ್ಲಿ ಇರಬೇಕು. ನಾವೇನು ರಾಕ್ಷಸರಾ? ಎದುರು ಬಂದವರನ್ನು ಹಿಡಿದು ನುಂಗುತ್ತೇವಾ’ ಎಂದು ಗದ್ಗದಿತರಾಗಿ ಆಕ್ರೋಶ ಹೊರಹಾಕಿದರು.

ADVERTISEMENT

‘ಈ ಬಗ್ಗೆ ಕೇಳಿದರೆ ಊರಿನ ಜನರು, ಬೆಂಗಳೂರಿನಲ್ಲಿ ನಿಮ್ಮವರು ಏನೇನೋ ತಪ್ಪು ಮಾಡ್ತಾರೆ ಎಂದು ಸಮಜಾಯಿಷಿ ಕೊಡುತ್ತಾರೆ. ಅಲ್ಲಿ ಯಾರೋ ತಪ್ಪು ಮಾಡಿದ್ದಕ್ಕೆ ಇಲ್ಲಿರುವ ನಮಗ್ಯಾಕೆ ಶಿಕ್ಷೆ? ಬೆಂಗಳೂರಿನಲ್ಲಿ ಗಂಡಸರು, ಹೆಂಗಸರು ತಪ್ಪು ಮಾಡಿದರೆ ಉಳಿದ ಊರಿನವರೂ ಸರಿಯಿಲ್ಲ ಎಂದು ಹೇಳಲಾಗುತ್ತದೆಯೇ? ಈ ಮನಸ್ಥಿತಿ ಯಾಕೆಂದು ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೇಡಿಯೊ ನಿರೂಪಕಿ, ಚಲನಚಿತ್ರ ನಟಿಯೂಆಗಿರುವ ಸಮುದಾಯದ ಪ್ರಮುಖರಾದಕಾಜಲ್ ಬ್ರಹ್ಮಾವರ ಮಾತನಾಡಿ, ‘ಸರ್ಕಾರವು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯಗಳು ಹಲವು ಜಿಲ್ಲೆಗಳಲ್ಲಿ ಜಾರಿಯಾಗಿವೆ. ಆಧಾರ್ ಕಾರ್ಡ್, ಪಡಿತರ ಸೌಲಭ್ಯ, ಮತದಾರರ ಗುರುತಿನ ಪತ್ರ ಮುಂತಾದವು ಸಿಗುತ್ತಿವೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಇರುವ ಇಬ್ಬರಿಗೂ ಈ ಸೌಲಭ್ಯಗಳು ಸಿಕ್ಕಿಲ್ಲ. ನಮ್ಮ ಸಮುದಾಯದವರಿಗೆ ಸರ್ಕಾರ ನೀಡುತ್ತಿರುವ ಮಾಸಾಶನ ₹ 500 ಇವರಿಗೆ ದೊರೆಯುತ್ತಿಲ್ಲ. ಸಮುದಾಯದ ಸದಸ್ಯರು ಸ್ವ ಉದ್ಯೋಗ ಕೈಗೊಳ್ಳಲು ಸರ್ಕಾರ ನೀಡುವ ₹ 50 ಸಾವಿರ ಸಹಾಯಧನದ ಮಾಹಿತಿಯೂ ಇಲ್ಲ’ ಎಂದು ದೂರಿದರು.

‘ಇಬ್ಬರೂ ಹೊನ್ನಾವರದಲ್ಲೇ ಹಲವು ವರ್ಷಗಳಿಂದ ಇರುವ ಕಾರಣ ಅಲ್ಲಿಂದ ಬೇರೆ ಊರುಗಳಿಗೆ ಹೋಗಲು ಒಪ್ಪುತ್ತಿಲ್ಲ. ಅವರಿಗೆ ಮೂರು ಗುಂಟೆ ನಿವೇಶನ ನೀಡಿದರೆ ಗುಡಿಸಲನ್ನಾದರೂ ಕಟ್ಟಿಕೊಂಡು ಜೀವನ ಮಾಡುತ್ತಾರೆ. ಇದಕ್ಕೆ ಜಿಲ್ಲಾಡಳಿತ ಮನಸ್ಸು ಮಾಡಬೇಕು’ ಎಂದು ಒತ್ತಾಯಿಸಿದರು.

ನಮಿತಾ, ನಗ್ಮಾ ಅವರೂಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.