ADVERTISEMENT

‘ಅಪ್ಪನ ಹೆಸರಿಂದ ನನ್ನ ಗುರುತಿಸುವುದು ನನಗೆ ಹೆಮ್ಮೆ’:ಶಾಸಕಿ ಶಾರದಾ ಶೆಟ್ಟಿ

ಎಂ.ಜಿ.ನಾಯ್ಕ
Published 15 ಜೂನ್ 2019, 19:45 IST
Last Updated 15 ಜೂನ್ 2019, 19:45 IST
ಶಾರದಾ ಶೆಟ್ಟಿ
ಶಾರದಾ ಶೆಟ್ಟಿ   

ಕುಮಟಾದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ತಂದೆ ಗೋಪಾಲ ಶೆಟ್ಟಿ ಅವರಿಂದ ಜೀವನದಲ್ಲಿ ಸಿಕ್ಕ ಮಾರ್ಗದರ್ಶನ ಅಪಾರವಾದುದು. ತಮ್ಮ ತಂದೆಯ ಜೊತೆಗೆ ಕಳೆದ ದಿನಗಳನ್ನು ನೆನಪಿಸಿಕೊಂಡು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ನಮ್ಮ ಹೆತ್ತವರಿಗೆ ನಾವು 11 ಮಕ್ಕಳು, ಆದರೂ ನಮಗೆ ಬಡತನದ ಅರಿವಿಲ್ಲದಂತೆ ನಮ್ಮ ತಂದೆ ನಮ್ಮನ್ನು ನೋಡಿಕೊಂಡರು. ನಮ್ಮ ತಾಯಿ ಕೊಂಚ ಕಟ್ಟುನಿಟ್ಟಿನವರಾಗಿದ್ದರು. ತಂದೆಯವರದು ಮಾತ್ರ ಹೆಂಗರುಳು. ಯಾರೂ ಮನೆಗೆ ಬಂದರೂ ಊಟ ಮಾಡಿಕೊಂಡೇ ಹೋಗಬೇಕು ಎಂದು ಅವರು ಬಯಸುತ್ತಿದ್ದರು’

‘ಶಿರಸಿ ಟಿ.ಎಸ್.ಎಸ್‌.ನಲ್ಲಿ ನೌಕರಿಯಲ್ಲಿದ್ದ ಅವರು ಆ ಕಾಲದಲ್ಲಿ ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದ್ದರು. ನಮಗೆ ಬೇಕಾದ ಬಟ್ಟೆ, ಹಣಕ್ಕೆ ಎಂದೂ ಕೊರತೆ ಮಾಡಿರಲಿಲ್ಲ. ಮನೆಯಲ್ಲಿ 10 ಗಂಡು ಮಕ್ಕಳು ಹುಟ್ಟುವುದಕ್ಕಿಂತ10 ಹೆಣ್ಣು ಮಕ್ಕಳು ಹುಟ್ಟಿದರೆ ಹತ್ತು ಊರು ನೋಡಲು ಸಾಧ್ಯವಾಗುತ್ತದೆ ಎಂದು ತಮಾಷೆ ಮಾಡುತ್ತಿದ್ದರು’

ADVERTISEMENT

‘ಅಪ್ಪ ನಮ್ಮ ಪರ ಎಂದು ನಾವೆಲ್ಲ ‘ಅಪ್ಪ ನಮಗೆ ಅದು ಬೇಕು, ಇದು ಬೇಕು’ ಎಂದು ಹಕ್ಕಿನಿಂದಲೇ ಅಪ್ಪನಿಂದ ಎಲ್ಲ ಪಡೆಯುತ್ತಿದ್ದೆವು. ಮಕ್ಕಳ ಬಗ್ಗೆ ಅಂಥ ಕನಸು ಕಟ್ಟಿಕೊಂಡಿರದ ಅವರು ಎಲ್ಲರೂ ಒಳ್ಳೆಯ ಗಂಡನ ಮನೆಯನ್ನು ಸೇರಬೇಕು. ಅಲ್ಲಿ ಅವರಿಗೆ ಮುಂದೆ ಉತ್ತಮ ಅವಕಾಶ ಸಿಗಬಹುದು ಎನ್ನುತ್ತಿದ್ದರು. ನಾನು ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿ ಶಾಸಕಿಯಾದಾಗ ನನಗೆ ಮೊದಲು ನೆನಪಾದದ್ದು ಅಪ್ಪನ ಆ ನುಡಿ...’(ಒಂದು ಕ್ಷಣ ಮೌನ)

‘ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಶಿರಸಿಯ ತವರು ಮನೆಗೆ ಹೋದಾಗೆಲ್ಲ ಹೆಚ್ಚಿನವರು ನನ್ನನ್ನು ಶಾಸಕಿ ಎಂದು ಗುರುತಿಸುವ ಬದಲು ನೀವು ಗೋಪಾಲ ಶೆಟ್ಟರ ಮಗಳಲ್ಲವೇ ಎಂದೇ ಕೇಳುತ್ತಿದ್ದರು. ನನ್ನ ಅಪ್ಪ ಊರಿನಲ್ಲಿ ಹೊಂದಿದ ಒಳ್ಳೆಯ ಹೆಸರು ನೆನದು ಅಪ್ಪನ ಬಗ್ಗೆ ಹೆಮ್ಮೆಯಾಗುತ್ತಿದೆ’ (ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.