ADVERTISEMENT

ಶಿರಸಿ: ಪರಿಸರ ಪಾಠಕ್ಕೆ ರೂಪುಗೊಳ್ಳಲಿದೆ ಅಧ್ಯಯನ ವನ

ನೆಡುತೋಪು ಇದ್ದ ಜಾಗದಲ್ಲಿ ವಿವಿಧ ಬಗೆಯ ಸಸಿಗಳ ನಾಟಿಗೆ ಸಿದ್ಧತೆ

ರಾಜೇಂದ್ರ ಹೆಗಡೆ
Published 1 ಅಕ್ಟೋಬರ್ 2024, 5:51 IST
Last Updated 1 ಅಕ್ಟೋಬರ್ 2024, 5:51 IST
ಉದ್ದೇಶಿತ ಅಧ್ಯಯನ ವನ ನಿರ್ಮಾಣವಾಗುವ ಶಿರಸಿಯ ಹೊರವಲಯ ಹುತ್ಗಾರ್ ಬಳಿ ಇರುವ ನೆಡುತೋಪು ಪ್ರದೇಶ
ಉದ್ದೇಶಿತ ಅಧ್ಯಯನ ವನ ನಿರ್ಮಾಣವಾಗುವ ಶಿರಸಿಯ ಹೊರವಲಯ ಹುತ್ಗಾರ್ ಬಳಿ ಇರುವ ನೆಡುತೋಪು ಪ್ರದೇಶ   

ಶಿರಸಿ: ದಶಕಗಳ ಕಾಲ ಏಕಜಾತೀಯ ನೆಡುತೋಪಾಗಿದ್ದ ಪ್ರದೇಶವನ್ನು ವಿದ್ಯಾರ್ಥಿ ಹಾಗೂ ಸಾರ್ವಜನಿಕ ಸ್ನೇಹಿ ಅಧ್ಯಯನ ವನವಾಗಿ ರೂಪಿಸಲು ಅರಣ್ಯ ಇಲಾಖೆ ಮುಂದಾಗಿದೆ.

ನಗರದ ಹೊರವಲಯದ ಹುತ್ಗಾರ ಗ್ರಾಮ ಪಂಚಾಯಿತಿ ಸಮೀಪ ರಸ್ತೆ ಅಂಚಿನಲ್ಲಿ ಅರಣ್ಯ ಇಲಾಖೆಯ ಅಂದಾಜು 12 ಎಕರೆ ಪ್ರದೇಶದಲ್ಲಿ ಇದ್ದ ಅಕೇಶಿಯಾ ನೆಡುತೋಪನ್ನು, ವರ್ಷದ ಹಿಂದೆ ಕಟಾವು ಮಾಡಲಾಗಿದೆ. ಇದೇ ಜಾಗದಲ್ಲಿ ವಿವಿಧ ಜಾತಿಯ ಗಿಡಗಳ ನಾಟಿಗೆ ಸಿದ್ಧತೆ ನಡೆಸಿದೆ.

ಹಲಸು, ಮತ್ತಿ, ಹೊನ್ನೆ, ತೇಗ, ನಂದಿ, ನೇರಲೆ, ನೆಲ್ಲಿ, ನಾಗಸಂಪಿಗೆ, ಸೀಸಂ, ಶಿವಣಿ, ವಾಟೆ, ಭರಣಗಿ ಸೇರಿ ಬಿದಿರಿನ ವಿಶಿಷ್ಟ ತಳಿಗಳು, ವಿನಾಶದಂಚಿನ, ಔಷಧೀಯ ತಳಿಗಳಿಗೆ ಈ ನೆಲದಲ್ಲಿ ಜಾಗ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಿದೆ. 

ADVERTISEMENT

‘ಕಳವೆಯಲ್ಲಿ ಅರಣ್ಯ ಇಲಾಖೆಯ ಕಾನ್ಮನೆ ಇದೆ. ಅಲ್ಲಿ ಪರಿಸರ ಸಂಬಂಧಿ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಇದಕ್ಕೆ ಪೂರಕವಾಗಿ ಜಲಪಥ ನಿರ್ಮಾಣದ ಬೇಡಿಕೆ ವರ್ಷಗಳಿಂದ ಇದೆ. ಶಿರಸಿ ಹುಲೇಕಲ್ ರಸ್ತೆಯ ಕಳವೆ ಕ್ರಾಸ್‍ವರೆಗೆ ಅಧ್ಯಯನಶೀಲರಿಗೆ, ಸಾರ್ವಜನಿಕರಿಗೆ ಪರಿಸರ ಪಾಠ ಹೇಳುವ ಮಾದರಿಗಳನ್ನು ನಿರ್ಮಿಸುವುದು ಈ ಜಲಪಥದ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಇದೀಗ ನೆಡುತೋಪು ಕಟಾವಾದ ಜಾಗದಲ್ಲಿ ಪರಿಸರ ಅಧ್ಯಯನಕ್ಕೆ ಪೂರಕವಾಗುವಂಥ ವೈವಿಧ್ಯ ತಳಿಗಳ ಗಿಡಗಳ ನಾಟಿಗೆ ಸಿದ್ಧತೆ ಆರಂಭಗೊಂಡಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉದ್ಯಾನಗಳಿದ್ದು, ತಾಂತ್ರಿಕ ಕಾರಣಕ್ಕೆ ಹೊಸ ಉದ್ಯಾನ ನಿರ್ಮಿಸಲು ಇಲಾಖೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಅಧ್ಯಯನ ವನ ನಿರ್ಮಿಸಿ ಅದಕ್ಕೆ ಉದ್ಯಾನದ ಸ್ವರೂಪ ನೀಡುವುದು ಇಲಾಖೆ ಆಲೋಚನೆಯಾಗಿದೆ. ಭವಿಷ್ಯದಲ್ಲಿ ಪರಿಸರಾಸಕ್ತರು ಇಲ್ಲಿ ಬಂದು ಗಿಡ, ಮರಗಳು, ಸಸ್ಯ ಸಂಕುಲಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬಹುದಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

‘ಹುತ್ಗಾರ ಸುತ್ತಮುತ್ತ ಯಾವುದೇ ಉದ್ಯಾನಗಳಿಲ್ಲ. ವಾಯುವಿಹಾರಕ್ಕೆ ತೆರಳುವ ಹುತ್ಗಾರ, ಹಾಲಳ್ಳ, ಮಣಜವಳ್ಳಿ, ಮಾರಿಕಾಂಬಾ ಕಾಲೋನಿ, ನವನಗರದ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ. ಇದೇ ಕಾರಣಕ್ಕೆ ರಸ್ತೆ ಪಕ್ಕ ಇರುವ ಅರಣ್ಯ ಇಲಾಖೆ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಒತ್ತಾಯವಿತ್ತು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಂ.ಆರ್.ಹೆಗಡೆ.

***

ಜಲಪಥ ಯೋಜನೆಯ ಆರಂಭಿಕ ಹಂತವಾಗಿ ಹುತ್ಗಾರ ಬಳಿ ಅಧ್ಯಯನ ವನ ನಿರ್ಮಿಸಿದರೆ ಪರಿಸರ ಶಿಕ್ಷಣಕ್ಕೆ ಸಾಕಷ್ಟು ಅನುಕೂಲ ಆಗುತ್ತದೆ.

-ಶಿವಾನಂದ ಕಳವೆ ಪರಿಸರ ಬರಹಗಾರ

ಮಳೆಗಾಲದ ಬಳಿಕ ಅಧ್ಯಯನ ವನದ ಸುತ್ತಲೂ ಬೇಲಿ ನಿರ್ಮಿಸಿ ಒಳಗಡೆ ಉತ್ತಮ ಹಾಗೂ ವೈವಿಧ್ಯ ಜಾತಿಯ ಗಿಡಗಳನ್ನು ನಾಟಿ ಮಾಡಲಾಗುವುದು. ನಂತರ ವಾಕಿಂಗ್ ಪಾಥ್ ಸೇರಿ ಇತರ ವ್ಯವಸ್ಥೆ ಕಲ್ಪಿಸಲಾಗುವುದು.

-ಜಿ.ಆರ್.ಅಜ್ಜಯ್ಯ ಡಿಎಫ್ಒ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.