ಶಿರಸಿ: ನಗರದ ರಾಘವೇಂದ್ರ ಮಠಕ್ಕೆ ತೆರಳುವ ಮಾರ್ಗದ ಆರಂಭದಲ್ಲಿ ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ನೂರಾರು ಸಾರ್ವಜನಿಕರು ಶುಕ್ರವಾರ ವಿರೋಧ ವ್ಯಕ್ತಪಡಿಸಿದರು.
ನಗರದ ರಾಘವೇಂದ್ರ ಮಠಕ್ಕೆ ತೆರಳುವ ಮುಖ್ಯ ಮಾರ್ಗವಾಗಿದ್ದು, ನೂರಾರು ಭಕ್ತರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದರೆ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತದೆ. ಅಲ್ಲದೇ ಮಾರಿಕಾಂಬಾ ದೇವಿ ಜಾತ್ರೆಯ ಮತ್ತು ಗಣೇಶ ಚತುರ್ಥಿ ಸಂದರ್ಭದಲ್ಲಿ ಇಲ್ಲಿ ಅನ್ನದಾನ ನಡೆಯುತ್ತದೆ. ಬೇರೆ ಜಾಗದಲ್ಲಿ ಶೌಚಾಲಯ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.
ನಗರಸಭೆ ಅಧ್ಯಕ್ಷರು, ವಾರ್ಡ್ ಸದಸ್ಯೆ ಹಾಗೂ ಪೌರಾಯುಕ್ತರು ಸ್ಥಳಕ್ಕಾಗಮಿಸಿ, ಜನರ ಅಹವಾಲು ಆಲಿಸಬೇಕು ಎಂದು ಆಗ್ರಹಿಸಿದರು.
ರಾಘವೇಂದ್ರ ಸೇವಾ ಸಮಿತಿ ಸದಸ್ಯ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಸಾರ್ವಜನಿಕ ಶೌಚಾಲಯ ನಿರ್ಮಿಸುವುದರ ಜತೆ ಸ್ಬಚ್ಛತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ರಾಘವೇಂದ್ರ ಸರ್ಕಲ್ ಬಳಿಯ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ರಾಘವೇಂದ್ರ ಯುವಕ ಮಂಡಳದ ಸಚಿನ ಅರ್ಗೇಕರ ಮಾತನಾಡಿ, ಶೌಚಾಲಯ ನಿರ್ಮಿಸಿದರೆ ಗಲೀಜು ನೀರು ತುಳಿದು ಮಠಕ್ಕೆ ತೆರಳಬೇಕಾಗುತ್ತದೆ. ಕಾರ್ತಿಕ ಮಾಸದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ರಾಯರ ಪಲ್ಲಕ್ಕಿಯೂ ಇದೇ ದಾರಿಯಲ್ಲಿ ಸಾಗುತ್ತದೆ. ಹಾಗಾಗಿ ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ವಾರ್ಡ್ ಸದಸ್ಯೆ ದೀಪಾ ಮಹಾಲಿಂಗಣ್ಣನವರ್ ಹಾಗೂ ಪೌರಾಯುಕ್ತ ಕಾಂತರಾಜು, ಸಾರ್ವಜನಿಕರ ವಿರೋಧದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಡಿ.ಡಿ.ಮಾಡಗೇರಿ, ಗಣಪತಿ ಶೆಟ್ಟಿ, ಗೌತಮ, ವಿಶಾಲ ನಾಯ್ಕ, ಸಂತೋಷ ಕಾರಳ್ಳಿ, ಮಂಜುನಾಥ ದೇಶಳ್ಳಿ, ಸಂತೋಷ ನಾಯ್ಕ, ಲೋಹಿತ ಕಾನಡೆ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.