ADVERTISEMENT

ಶಿರೂರು ಗುಡ್ಡ ಕುಸಿತ: ದುರಂತದ ನೆಲದಲ್ಲಿ ಬದುಕ ದುಸ್ತರ

ಕಂಗೆಟ್ಟ ಶಿರೂರು, ಉಳುವರೆ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 5:20 IST
Last Updated 7 ಆಗಸ್ಟ್ 2024, 5:20 IST
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿನ ಜನವಸತಿ ಪ್ರದೇಶಕ್ಕೆ ಸಮೀಪದಲ್ಲಿರುವ ಗುಡ್ಡ
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿನ ಜನವಸತಿ ಪ್ರದೇಶಕ್ಕೆ ಸಮೀಪದಲ್ಲಿರುವ ಗುಡ್ಡ   

ಅಂಕೋಲಾ: ಕೃಷಿ, ಮೀನುಗಾರಿಕೆ ಚಟುವಟಿಕೆಯಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ತಾಲ್ಲೂಕಿನ ಸಗಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು, ಉಳುವರೆ ಗ್ರಾಮದ ಜನರನ್ನು ಕುಸಿದ ಶಿರೂರು ಗುಡ್ಡವು ಕಂಗೆಡಿಸಿದೆ. ಗ್ರಾಮದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯ ಅಂಚಿನ ಗುಡ್ಡವು ಈಗಲೂ ಭಯ ಹುಟ್ಟಿಸುತ್ತಿದೆ.

ಗಂಗಾವಳಿ ನದಿಯು ಸಗಡಗೇರಿ ಗ್ರಾಮ ಪಂಚಾಯಿತಿ ಪ್ರದೇಶವನ್ನು ಇಬ್ಭಾಗಿಸಿದೆ. ಒಂದು ಭಾಗದಲ್ಲಿ ಉಳುವರೆ, ಸಗಡಗೇರಿ ಇದ್ದರೆ, ಇನ್ನೊಂದು ಬದಿಯಲ್ಲಿ ಶಿರೂರು, ಕಾಮಗೆ, ಬಳಲೆ, ದೇವಿಗದ್ದೆ ಗ್ರಾಮಗಳಿವೆ. ಈ ಪೈಕಿ ಈಚೆಗೆ ಗುಡ್ಡ ಕುಸಿದಿದ್ದರಿಂದ ಉಳುವರೆ ಗ್ರಾಮದ ಜನಜೀವನ ಅಸ್ತವ್ಯಸ್ತಗೊಂಡಿದೆ.

‘ಗುಡ್ಡ ಕುಸಿದ ರಭಸಕ್ಕೆ ಗಂಗಾವಳಿ ನದಿಯಲ್ಲಿನ ನೀರು ರಭಸವಾಗಿ ಗ್ರಾಮಕ್ಕೆ ನುಗ್ಗಿತ್ತು. ಇದರಿಂದ ಮನೆ, ಕೃಷಿಭೂಮಿಗೆ ಹಾನಿಯಾಗುವ ಜತೆಗೆ ಎರಡು ವರ್ಷದ ಹಿಂದಷ್ಟೇ ನಿರ್ಮಿಸಿದ ತಡೆಗೋಡೆ ಮತ್ತು ರಸ್ತೆ ಹಾಳಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ರಸ್ತೆ ಹಾಳಾದರೆ ಸಂಪರ್ಕಕ್ಕೆ ಪರ್ಯಾಯ ಮಾರ್ಗವೂ ಇಲ್ಲ’ ಎನ್ನುತ್ತಾರೆ ಉಳುವರೆ ಗ್ರಾಮಸ್ಥ ಮಂಜು ಗೌಡ.

ADVERTISEMENT

‘ಗುಡ್ಡ ಕುಸಿತ ದುರಂತದ ಬಳಿಕ ಗ್ರಾಮದಲ್ಲಿನ ಜಲಮೂಲಗಳ ನೀರು ಸೇವನೆಗೆ ಯೋಗ್ಯವಾಗಿಲ್ಲ. ಕೆಸರು ನೀರು ಬಾವಿಯಲ್ಲಿ ತುಂಬಿಕೊಂಡಿದೆ. ಜಲಸಂಗ್ರಹಾಗಾರ ಸಮೀಪದಲ್ಲಿದ್ದರೂ ನೀರು ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ. ಶಿರೂರಿನಲ್ಲಿನ ಗುಡ್ಡ ಆಗಾಗ ಕುಸಿಯುತ್ತಿದ್ದು, ಮತ್ತೆ ಅವಘಡ ಸಂಭವಿಸಬಹುದು ಎಂಬ ಆತಂಕದಲ್ಲೇ ದಿನ ಕಳೆಯುತ್ತಿದ್ದೇವೆ’ ಎಂದು ಕೇಶವ ಗೌಡ ದೂರಿದರು.

‘ಗುಡ್ಡ ಕುಸಿತ ಅವಘಡದ ವೇಳೆ ಉಳುವರೆಯ ಮೀನುಗಾರರ ಕೇರಿಯ ಹಲವು ಮನೆಗಳಿಗೂ ಹಾನಿಯಾಗಿದೆ. ಜೀವನಕ್ಕೆ ಆಧಾರವಾಗಿದ್ದ ನಾಡದೋಣಿಗಳಿಗೂ ಹಾನಿಯುಂಟಾಗಿದ್ದು, ಸದ್ಯ ಮೀನುಗಾರಿಕೆ ನಡೆಸಲು ಕಷ್ಟವಾಗಿದೆ’ ಎಂದು ಉದಯ ಅಂಬಿಗ ಹೇಳಿದರು.

‘ಸಗಡಗೇರಿ ಗ್ರಾಮಕ್ಕೆ ಏಕೈಕ ಕಿರಿದಾದ ರಸ್ತೆ ಇದೆ. ಇದನ್ನು ಬಿಟ್ಟರೆ ಗದ್ದೆಯ ಕಾಲುದಾರಿ ಮಾತ್ರ ಸಂಪರ್ಕಕ್ಕೆ ಆಸರೆಯಾಗಿದೆ. ನದಿ ಅಂಚಿನಲ್ಲಿ ಊರಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಸಗಡಗೇರಿಯ ರಾಮಚಂದ್ರ ನಾಯಕ ಹೇಳಿದರು.

ಸಗಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 873 ಕುಟುಂಬವಗಳಿದ್ದು, 4,151 ಜನಸಂಖ್ಯೆ ಇದೆ. ಉಳುವರೆ ಗ್ರಾಮವೊಂದರಲ್ಲೇ 255 ಕುಟುಂಬಗಳಿದ್ದು, 1,300ಕ್ಕೂ ಹೆಚ್ಚು ಜನರಿದ್ದಾರೆ.

ಚದುರಿದ ಕುಟುಂಬಗಳು

ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಹಾನಿಗೆ ಒಳಗಾದ ಉಳುವರೆ ಗ್ರಾಮದಲ್ಲಿ ಆರು ಮನೆಗಳು ಸಂಪೂರ್ಣ ನಾಮಾವಶೇಷವಾಗಿದ್ದವು. 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿತ್ತು. ಗ್ರಾಮದ ಜನರು ಎತ್ತರದ ಪ್ರದೇಶದಲ್ಲಿರುವ ಶಾಲೆಯಲ್ಲಿ ತೆರೆದಿದ್ದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ‘ಶಾಲೆಗಳು ಪುನರಾರಂಭಗೊಂಡಿದ್ದರಿಂದ ಕಾಳಜಿ ಕೇಂದ್ರ ಸ್ಥಗಿತವಾಗಿದೆ. ಕೆಲವರಿಗೆ ಸಮೀಪದಲ್ಲಿರುವ ಸಭಾಭವನದಲ್ಲಿ ಆಸರೆ ಕಲ್ಪಿಸಿದ್ದರೆ ಕೆಲವರು ಮಾದನಗೇರಿಯಲ್ಲಿ ಬಾಡಿಗೆ ಮನೆ ಪಡದು ವಾಸವಿದ್ದಾರೆ.  ಹಲವರು ಸಂಬಂಧಿಕರ ಮನೆಯಲ್ಲಿ ಉಳಿದಿದ್ದಾರೆ. ಶ್ರಮಿಕರೇ ಹೆಚ್ಚಿದ್ದ ಊರಿನಲ್ಲಿ ಈಗ ಜನಜೀವನ ಚದುರಿದೆ’ ಎಂದು ಗ್ರಾಮಸ್ಥ ಕೇಶವ ಗೌಡ ಹೇಳಿದರು.

ಉಳುವರೆ ಗ್ರಾಮಕ್ಕೆ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಾನಿಗೀಡಾದ ರಸ್ತೆ ಮರು ನಿರ್ಮಾಣ ಕುರಿತು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ.
ಸಂದೀಪ ಗಾಂವಕರ, ಸಗಡಗೇರಿ ಪಿಡಿಒ
ಶಿರೂರು ಗುಡ್ಡ ಕುಸಿತದಿಂದ ಉಳುವರೆ ಗ್ರಾಮದ ರಸ್ತೆ ಮತ್ತು ತಡೆಗೋಡೆಗೆ ಹಾನಿ ಉಂಟಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.