ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ಅವಘಡದಲ್ಲಿ ಕಾಣೆಯಾದ ಜನರು ಮತ್ತು ಲಾರಿಗಾಗಿ ಸುತ್ತಮುತ್ತಲ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಸೇನಾ ಸಿಬ್ಬಂದಿ ಮಂಗಳವಾರ ನೀರಿನೊಳಗೆ ಶೋಧ ಆರಂಭಿಸಿದರು.
ಘಟ್ಟದ ಮೇಲೆ ವ್ಯಾಪಕ ಮಳೆ ಸುರಿದಿರುವ ಕಾರಣ ಗಂಗಾವಳಿ ನದಿಯಲ್ಲಿ ನೀರಿನ ಹರಿವು ರಭಸವಾಗಿದೆ. ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ನೌಕಾದಳದ ವಿಶೇಷ ಮುಳುಗುತಜ್ಞರು ಕಾರ್ಯಾಚರಣೆ ನಡೆಸಿದರೂ ಕೆಸರಿನಿಂದ ಹುಡುಕಾಟ ಕಷ್ಟವಾಗಿದೆ.
‘ರಬ್ಬರ್ ಬೋಟು ಬಳಸಿ ದಿನವಿಡೀ ನದಿಯಲ್ಲಿ ಅಲ್ಲದೇ ಮಣ್ಣಿನ ರಾಶಿ ಸುತ್ತಮುತ್ತ ಹುಡುಕಾಡಿದರೂ ಲಾರಿ ಮತ್ತು ಕಾಣೆಯಾದ ವ್ಯಕ್ತಿಗಳ ಬಗ್ಗೆ ಸುಳಿವು ಸಿಗಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಗುಡ್ಡದಿಂದ ಬಿದ್ದ ಮಣ್ಣಿನ ರಾಶಿಯ ಬಹುಪಾಲು ನದಿಗೆ ಬಿದ್ದಿದೆ. ದೊಡ್ಡ ಕಲ್ಲುಗಳ ರಾಶಿಯೂ ಇದೆ. ಅವುಗಳಡಿ ಲಾರಿ ಸಿಲುಕಿರಬಹುದು. ಇದಕ್ಕಾಗಿ 30 ಅಡಿ ಆಳ ಶೋಧಿಸುವ ರೆಡಾರ್ ಅಗತ್ಯವಿದೆ ಎಂದು ಸೇನೆ ತಿಳಿಸಿದೆ. ಸದ್ಯ ಇಲ್ಲಿ ಗರಿಷ್ಠ 10 ಅಡಿ ಆಳ ಶೋಧಿಸಬಲ್ಲ ರೆಡಾರ್ ಇದೆ’ ಎಂದು ಅವರು ತಿಳಿಸಿದರು.
ಮರಾಠಾ ರೆಜಿಮೆಂಟ್ ಮತ್ತು ನೌಕಾದಳದ 60, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 29, ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) 44 ಸಿಬ್ಬಂದಿ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಾಚಣೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.