ADVERTISEMENT

ಶಿರೂರು ದುರಂತ | IRB, NHAI ಹೊಣೆ: ಸಚಿವ ಮಂಕಾಳ ವೈದ್ಯ

ಅಧಿಕಾರಿಗಳ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:37 IST
Last Updated 17 ಜುಲೈ 2024, 15:37 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಸತೀಶ ಸೈಲ್ ಪಾಲ್ಗೊಂಡಿದ್ದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಸತೀಶ ಸೈಲ್ ಪಾಲ್ಗೊಂಡಿದ್ದರು.   

ಕಾರವಾರ: ‘ಸುರಕ್ಷತೆಗೆ ಒತ್ತು ನೀಡದೆ ಕೆಲಸ ಮಾಡುವ ಮೂಲಕ ಅಮಾಯಕ ಜನರು ಜೀವ ತೆರುವಂತೆ ಮಾಡಿರುವ ಐ.ಆರ್.ಬಿ ಕಂಪನಿಗೆ ಹೆದ್ದಾರಿ ಕಾಮಗಾರಿ ನಡೆಸಲು ಸಹಕಾರ ನೀಡಬಾರದು’ ಎಂದು ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಶಿರೂರು ದುರಂತಕ್ಕೆ ಐ.ಆರ್.ಬಿ ಕಂಪನಿಯ ಅಸುರಕ್ಷಿತ ಕಾಮಗಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ಹರಿಹಾಯ್ದರು.

‘ಭೂಕುಸಿತ ಘಟನೆ ಉಂಟಾಗಲು ಕಾರಣರಾದ ಐ.ಆರ್.ಬಿ ಮತ್ತು ಎನ್.ಎಚ್.ಎ.ಐ ಅಧಿಕಾರಿಗಳ ವಿರುದ್ಧ ಅರಣ್ಯ ಕಾಯ್ದೆಯ ಅಡಿಯ ಪ್ರಕರಣ ದಾಖಲಿಸಿ’ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಮಳೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಳಜಿ ಕೇಂದ್ರ  ತೆರೆಯಲು ವಿಳಂಬ ಮಾಡಬಾರದು. ಕಾಳಜಿ ಕೇಂದ್ರದಲ್ಲಿ ಊಟ, ವಸತಿ, ಆರೋಗ್ಯ ಸೇರಿದಂತೆ ಯಾವ ಸೌಕರ್ಯಗಳಿಗೂ ಕೊರತೆಯಾಗದಂತೆ ಎಚ್ಚರವಹಿಸಬೇಕು. ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಮಾನವೀಯ ನೆಲೆಯಲ್ಲಿ ಗರಿಷ್ಠ ಪರಿಹಾರ ಮಂಜೂರು ಮಾಡಬೇಕು’ ಎಂದರು.

ಅಣಶಿ ಘಟ್ಟದಲ್ಲಿ ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ವಿಸ್ತರಣೆ ಕೈಗೊಳ್ಳಲು ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿ, ಜಾರಿಗೊಳಿಸುವಂತೆ ಶಾಸಕ ಸತೀಶ್ ಸೈಲ್ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.