ಕಾರವಾರ: ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಯತ್ನಿಸುತ್ತಿರುವ ವದಂತಿಯ ಬೆನ್ನಲ್ಲೆ ಈಚೆಗೆ ನಡೆದ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಆ.22 ರಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಹೆಬ್ಬಾರ್ ಪಕ್ಷಕ್ಕೆ ಮರು ಸೇರ್ಪಡೆಗೆ ಯತ್ನಿಸುತ್ತಿರುವುದಕ್ಕೆ ಆಕ್ಷೇಪಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
‘ಅಂದು ಪಕ್ಷ ಅಧಿಕಾರದಿಂದ ಇಳಿಯುವಂತೆ ಮಾಡಿ ಬಿಜೆಪಿ ಸೇರಿದ್ದವರು ಈಗ ಪುನಃ ಪಕ್ಷಕ್ಕೆ ಬರುವುದು ಸರಿಯಲ್ಲ. ಯಲ್ಲಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರು ಇರದಿದ್ದರೂ ಅಡ್ಡಿಯಿಲ್ಲ. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಕಾರ್ಯಕರ್ತ ಏರುಧ್ವನಿಯಲ್ಲಿ ಹೇಳಿರುವ ದೃಶ್ಯ ಇದಾಗಿದೆ.
ಕಾರ್ಯಕರ್ತರ ಅಸಮಾಧಾನದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವಕರ್, ‘ಪಕ್ಷದ ಸಭೆಯಲ್ಲಿ ಕೆಲವು ಕಾರ್ಯಕರ್ತರು ಅವರ ವೈಯಕ್ತಿಕ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಆದರೆ ಇದು ಯಾವುದೇ ಅಭಿಪ್ರಾಯ ಸಂಗ್ರಹಣೆಯ ಸಭೆ ಆಗಿರಲಿಲ್ಲ. ಶಿವರಾಮ ಹೆಬ್ಬಾರ್ ಪಕ್ಷಕ್ಕೆ ಸೇರ್ಪಡೆಯಾಗಲು ಯತ್ನಿಸುತ್ತಿರುವ ವಿಚಾರದ ಬಗ್ಗೆ ಪಕ್ಷದ ಸ್ಥಳೀಯ ಘಟಕಕ್ಕೆ ಯಾವುದೇ ಮಾಹಿತಿಯೂ ಇಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.