ADVERTISEMENT

ಕೃಷಿ ಯಾಂತ್ರೀಕರಣ ಉಪ ಅಭಿಯಾನಕ್ಕೆ ಅನುದಾನ ಕೊರತೆ: ಯೋಜನೆಗೆ ಹಿನ್ನಡೆ

ರಾಜೇಂದ್ರ ಹೆಗಡೆ
Published 14 ಜನವರಿ 2024, 8:36 IST
Last Updated 14 ಜನವರಿ 2024, 8:36 IST

ಶಿರಸಿ: ತೋಟಗಾರಿಕೆಯಲ್ಲಿ ಯಾಂತ್ರೀಕರಣ ಪ್ರೋತ್ಸಾಹದ ಉದ್ದೇಶದಿಂದ ಅನುಷ್ಠಾನಗೊಂಡ ಎಸ್.ಎಂ.ಎ.ಎಂ.( ಕೃಷಿ ಯಾಂತ್ರೀಕರಣ ಉಪ ಅಭಿಯಾನ) ಯೋಜನೆಯಡಿ ಶೇ 75ರಷ್ಟು ಅನುದಾನ ಬಿಡುಗಡೆಗೆ ಬಾಕಿಯಿದೆ. ಇದರಿಂದ ಜಿಲ್ಲೆಯ ತೋಟಗಾರರು ಸೌಲಭ್ಯಕ್ಕಾಗಿ ಕಾಯುವಂತಾಗಿದೆ.

ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಸಮಸ್ಯೆ ನೀಗುವ ಜತೆ ಯಾಂತ್ರೀಕರಣಕ್ಕೆ ಒತ್ತು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಕೆಲ ವರ್ಷಗಳ ಹಿಂದೆ ಜಾರಿಗೊಂಡಿದೆ. ಕಳೆದ ವರ್ಷಗಳಲ್ಲಿ ಅನುದಾನದ ಪ್ರಮಾಣದ ಜತೆ ಫಲಾನುಭವಿಗಳ ಸಂಖ್ಯೆಯೂ ಕಡಿಮೆಯಿತ್ತು. ಆದರೆ 2023–24ನೇ ಸಾಲಿನಲ್ಲಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ₹1.91 ಕೋಟಿ ಗುರಿ ನಿಗದಿ ಪಡಿಸಲಾಗಿತ್ತು. ಆ ಪ್ರಕಾರ ಮೊದಲ ಹಂತದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸುಮಾರು ₹40 ಲಕ್ಷ ಬಿಡುಗಡೆಯಾಗಿದ್ದು, 200ರಷ್ಟು ಫಲಾನುಭವಿಗಳಿಗೆ ಅನುಕೂಲವಾಗಿದೆ. ಆದರೆ ಈಗಾಗಲೇ ಜಿಲ್ಲಾದ್ಯಂತ ₹1 ಕೋಟಿಗೂ ಹೆಚ್ಚಿನ ಬೇಡಿಕೆಯ ಯಂತ್ರೋಪಕರಣಗಳ ಸಹಾಯಧನಕ್ಕೆ 350ರಿಂದ 400ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಸರ್ಕಾರದಿಂದ ಅನುದಾನ ಬಿಡುಗಡೆ ಆಗದ ಕಾರಣ ಕಾಯುವಂತಾಗಿದೆ.

ಯೋಜನೆಯಡಿ ಸಾಮಾನ್ಯರಿಗೆ ಶೇ 40 ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಪೂರಕವಾಗಿ ದೋಟಿ, ಏಣಿ, ಹುಲ್ಲು ಕತ್ತರಿಸುವ, ಅಡಿಕೆ ಸುಲಿಯುವ, ಮರ ಕತ್ತರಿಸುವ ಯಂತ್ರ, ಅಡಿಕೆ ಪಾಲಿಶ್ ಮಾಡುವ ಯಂತ್ರ, ಗುಂಡಿ ತೋಡುವ ಯಂತ್ರ, ಕೈಗಾಡಿ, ಸ್ಪ್ರೇಯರ್, ಕಾಳುಮೆಣಸು ಬಿಡುಸುವ ಯಂತ್ರ, ಟ್ರ್ಯಾಕ್ಟರ್ ಟ್ರಾಲಿ, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಹಲವು ರೈತೋಪಯೋಗಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುತ್ತದೆ. ಪ್ರಸ್ತುತ ಅರ್ಜಿ ಸಲ್ಲಿಸಿರುವ ರೈತರು ಈ ಯಂತ್ರಗಳ ಖರೀದಿ ಮಾಡಲು ಅನುದಾನ ಬಿಡುಗಡೆ ಆಗುವುದನ್ನೇ ಎದುರು ನೋಡುತ್ತಿದ್ದಾರೆ.

ADVERTISEMENT

‘ಅರ್ಜಿ ಸಲ್ಲಿಸಿ ತಿಂಗಳು ಕಳೆದಿದೆ. ಹಲವು ಬಾರಿ ತೋಟಗಾರಿಕಾ ಇಲಾಖೆಗೆ ಬಂದು ಅಧಿಕಾರಿಗಳ ಬಳಿ ಬಂದು ಮಾಹಿತಿ ಪಡೆದಿದ್ದೇನೆ. ಆದರೆ ಅನುದಾನವಿಲ್ಲದೇ ಇಲಾಖೆಯವರಾದರೂ ಏನು ಮಾಡಲು ಸಾಧ್ಯ’ ಎನ್ನುತ್ತಾರೆ ಕೃಷಿಕ ರಾಮಕೃಷ್ಣ ಹೆಗಡೆ ಶಿರಸಿ.

‘ಅನುದಾನ ಬಿಡುಗಡೆಯ ನಂತರ ಇಲಾಖೆ ಸೂಚಿಸಿದ ಕಡೆಗಳಲ್ಲಿ, ನಿಗದಿಪಡಿಸಿದ ಯಂತ್ರಗಳನ್ನು ಖರೀದಿಸಬೇಕು. ಹಾಗಾದರೆ ಮಾತ್ರ ಸಹಾಯಧನ ಪಡೆಯಬಹುದು. ಹೊರತಾಗಿ ಅನುದಾನ ಬರುವ ಪೂರ್ವದಲ್ಲಿ ಯಂತ್ರಗಳ ಖರೀದಿಸಿದರೆ ಸೌಲಭ್ಯ ಸಿಗುವುದಿಲ್ಲ‘ ಎನ್ನುತ್ತಾರೆ ಅವರು.

ಸರ್ಕಾರ ಒಂದೇ ಬಾರಿಗೆ ಯೋಜನೆಯ ಅನುದಾನ ಬಿಡುಗಡೆ ಮಾಡಬೇಕು. ಹಾಗಾದರೆ ಮಾತ್ರ ತಿಂಗಳ ಕಾಲ ರೈತರು ಸಹಾಯಧನಕ್ಕಾಗಿ ಕಾಯುವ ಸ್ಥಿತಿ ಬರುವುದಿಲ್ಲಮಂಜುನಾಥ ಹೆಗಡೆ ಯಡಳ್ಳಿ, ಕೃಷಿಕಸರ್ಕಾರ ಒಂದೇ ಬಾರಿಗೆ ಯೋಜನೆಯ ಅನುದಾನ ಬಿಡುಗಡೆ ಮಾಡಬೇಕು. ಹಾಗಾದರೆ ಮಾತ್ರ ತಿಂಗಳ ಕಾಲ ರೈತರು ಸಹಾಯಧನಕ್ಕಾಗಿ ಕಾಯುವ ಸ್ಥಿತಿ ಬರುವುದಿಲ್ಲ
ಮಂಜುನಾಥ ಹೆಗಡೆ ಯಡಳ್ಳಿ, ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.