ಕಾರವಾರ: ಪ್ರಮುಖ ರಾಷ್ಟ್ರೀಯ ಯೋಜನೆ ಹೊಂದಿರುವ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ತೀರಾ ಹಿಂದುಳಿದಿದೆ ಎಂಬ ಆರೋಪಗಳ ಬೆನ್ನಲ್ಲೇ ಕೆಲ ವರ್ಷಗಳ ಹಿಂದಿನಿಂದ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಕೂಗು ಬಲವಾಗುತ್ತ ಬಂದಿತ್ತು. ಆದರೆ, ಆಸ್ಪತ್ರೆ ಸ್ಥಾಪನೆ ಹಾಗಿರಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಲೂ ಸರ್ಕಾರಕ್ಕೆ ಸಾಧ್ಯವಾಗದ ಸ್ಥಿತಿ ಇದೆ.
ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್), ಜಿಲ್ಲೆಯ 11 ತಾಲ್ಲೂಕು ಆಸ್ಪತ್ರೆಗಳಿಂದ 104 ತಜ್ಞ ವೈದ್ಯರ ಪೈಕಿ ಕೇವಲ 68 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅನಸ್ತೇಶಿಯಾ, ಮೂಳೆ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು ಸೇರಿದಂತೆ 36 ತಜ್ಞ ವೈದ್ಯರ ಹುದ್ದೆ ಖಾಲಿಯೇ ಉಳಿದುಕೊಂಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಹೃದ್ರೋಗ ತಜ್ಞರು, ನರರೋಗ ತಜ್ಞರು ಮುಂದೆ ಬರುತ್ತಿಲ್ಲ. ಇದರಿಂದ ರೋಗಿಗಳನ್ನು ನೆರೆಯ ಹುಬ್ಬಳ್ಳಿ, ಮಂಗಳೂರು, ಉಡುಪಿ, ಗೋವಾದ ಆಸ್ಪತ್ರೆಗಳಿಗೆ ಕರೆದೊಯ್ಯುವ ಸ್ಥಿತಿ ಎದುರಾಗುತ್ತಿದೆ.
ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ಫಿಜಿಷಿಯನ್ ಹುದ್ದೆ ಖಾಲಿಯಿದೆ. ಹೀಗಾಗಿ ಪ್ಲೇಟ್ ಲೆಟ್ ಸಂಖ್ಯೆ ತೀರಾ ಕಡಿಮೆ ಇರುವ ರೋಗಿಗಳು ಸೇರಿದಂತೆ ನಿತ್ಯ ಹತ್ತಾರು ರೋಗಿಗಳು ಖಾಸಗಿ ಆಸ್ಪತ್ರೆ ಇಲ್ಲವೇ ಹೊರ ಊರಿನ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.
‘ಇರುವ ವ್ಯವಸ್ಥೆಯಲ್ಲೇ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಲಾಗುತ್ತಿದೆ. ಆದರೂ ಸರ್ಕಾರದಿಂದ ವೈದ್ಯರ ನೇಮಕ ಪ್ರಕ್ರಿಯೆ ಆಗುವವರೆಗೆ ಈ ಸಮಸ್ಯೆ ಮುಂದುವರಿಯುತ್ತದೆ’ ಎಂಬುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ ಹೇಳುತ್ತಾರೆ.
ಮುಂಡಗೋಡ ತಾಲ್ಲೂಕು ಆಸ್ಪತ್ರೆಯು ಕಳೆದ ಕೆಲವು ವರ್ಷಗಳಿಂದ ತಜ್ಞ ವೈದ್ಯರ ಕೊರತೆಯಿಂದ ಬಳಲುತ್ತಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿದೆ. ಫಿಜಿಷಿಯನ್, ಅರವಳಿಕೆ ತಜ್ಞ ವೈದ್ಯರ ಹುದ್ದೆ ಖಾಲಿಯಿದೆ. ಹೃದಯ ಸಂಬಂಧಿ ರೋಗಿಗಳು ತಜ್ಞ ವೈದ್ಯರಿಲ್ಲದೇ ಪರದಾಡುವಂತ ಪರಿಸ್ಥಿತಿಯಿದೆ. ಕಿವಿ, ಮೂಗು, ಗಂಟಲು ತಜ್ಞ ವೈದ್ಯರು ರಜೆ ಮೇಲಿದ್ದಾರೆ.
ಶಾಸಕ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಈಚೆಗೆ ತಾಲ್ಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ತಜ್ಞ ವೈದ್ಯರ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ಆಡಳಿತಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ ಗಮನಸೆಳೆದಿದ್ದರು.
ಭಟ್ಕಳ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ಮೂಳೆ ಶಸ್ತ್ರ ಚಿಕಿತ್ಸಕ ವೈದ್ಯರ ಕೊರತೆ ಕಾಡುತ್ತಿದೆ. ಅಪಘಾತ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಉಪಚರಿಸಬೇಕಾದ ನುರಿತ ಮೂಳೆ ಶಸ್ತ್ರಚಿಕಿತ್ಸಕ ಇರದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗೆ ಸಾಗಬೇಕಾದ ಸ್ಥಿತಿ ಇದೆ.
ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಲ್ ಫಿಜಿಷಿಯನ್, ಚರ್ಮರೋಗ ತಜ್ಞರು ಹಾಗೂ ಕಿವಿ, ಮೂಗು, ಗಂಟಲು (ಇಎನ್‌ಟಿ) ತಜ್ಞರ ಕೊರತೆ ಇದೆ. ಮಕ್ಕಳ ತಜ್ಞರು ವಾರದಲ್ಲಿ ಮೂರು ದಿನ ಮಾತ್ರ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯರಿದ್ದಾರೆ.
ಹೊನ್ನಾವರ ತಾಲ್ಲೂಕು ಆಸ್ಪತ್ರೆಯಲ್ಲಿ ಉದ್ದದ ಸರತಿ ಸಾಲು ದಿನನಿತ್ಯ ಬೆಳಗಿನಿಂದಲೇ ಇರುತ್ತದೆ. ರೋಗಿಗಳು ಸಾಲುಗಟ್ಟಿ ನಿಂತಿದ್ದರೂ ಚಿಕಿತ್ಸೆ ನೀಡಬೇಕಾದ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಲಭ್ಯರಿರುವುದಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿದೆ. ಶಸ್ತ್ರಚಿಕಿತ್ಸಕ, ಸ್ತ್ರೀರೋಗ ತಜ್ಞ ಹಾಗೂ ಕಣ್ಣಿನ ತಜ್ಞರ ಹುದ್ದೆಗಳು ಖಾಲಿಯಾಗಿದೆ.
‘ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯಗಳಿವೆ’ ಎಂದು ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ತಿಳಿಸಿದರು.
ಸಿದ್ದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರ ಮತ್ತು ಚರ್ಮರೋಗ ತಜ್ಞರ ಕೊರತೆ ಇದೆ. ಎರಡು ವರ್ಷಗಳ ಹಿಂದೆ ಇದ್ದ ಕಣ್ಣಿನ ವೈದ್ಯರ ವರ್ಗಾವಣೆಯ ನಂತರ ವೈದ್ಯರ ನಿಯುಕ್ತಿ ಆಗಿಲ್ಲ. ರೆಡಿಯೊಲಜಿ ಮತ್ತು ಮಾನಸಿಕ ರೋಗಿಗಳ ವಿಭಾಗ ಇಲ್ಲ. ಇದರಿಂದ ಸ್ಕ್ಯಾನಿಂಗ್ ಗಳಿಗೆ ರೋಗಿಗಳನ್ನು ಬೇರೆಡೆ ಕಳುಹಿಸುವ ಪರಿಸ್ಥಿತಿ ಇದೆ.
‘ತಜ್ಞ ವೈದ್ಯರ ನೇಮಕಾತಿಯ ಜತೆಗೆ ರೆಡಿಯೊಲಜಿ ವಿಭಾಗವನ್ನು ಆರಂಭಿಸಿ ವೈದ್ಯರನ್ನು ನೇಮಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಕಾಶ ಪುರಾಣಿಕ.
ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ. ಕೆಲ ವರ್ಷಗಳಿಂದ ಸ್ತ್ರೀರೋಗ ತಜ್ಞರು, ಹೃದಯ ರೋಗ ತಜ್ಞರು ಇಲ್ಲ.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಕುಮಟಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವ ಕೂಗು ಇನ್ನೂ ಜೀವಂತವಾಗಿದೆ. ಆದರೆ ಅದರ ಅನುಷ್ಠಾನದ ಬಗ್ಗೆ ಯಾವುದೇ ಕ್ರಮ ಇಲ್ಲವಾಗಿದೆ. ‘ಕರಾವಳಿ ಭಾಗದ ಮಧ್ಯವರ್ತಿ ತಾಲ್ಲೂಕು ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಅಕ್ಕಪಕ್ಕ ಅಪಘಾತಗಳು ಸಂಭವಿಸಿದಾಗ ಸುಲಭವಾಗಿ ಜೀವ ಉಳಿಸುವ ಅವಕಾಶ ಇರುತ್ತಿತ್ತು. ಆದರೆ ಅದರ ಅನುಷ್ಠಾನದ ವೈಫಲ್ಯಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ’ ಎಂದು ದೂರುತ್ತಾರೆ ವಕೀಲರ ಸಂಘದ ಕುಮಟಾ ಘಟಕದ ಅಧ್ಯಕ್ಷ ಆರ್.ಜಿ.ನಾಯ್ಕ. ತಾಲ್ಲೂಕು ಆಸ್ಪತ್ರೆಯಲ್ಲಿ ಕಿವಿ ಮೂಗು ಗಂಟಲು ಹಾಗೂ ನೇತ್ರ ತಜ್ಞರ ಕೊರತೆ ಮಾತ್ರ ಇದೆ.
‘ದಾಂಡೇಲಿ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಜಿಷಿಯನ್ ಅನಸ್ತೇಶಿಯಾ ಹುದ್ದೆ ಖಾಲಿ ಇದೆ. ಐದು ಡಯಾಲಿಸಿಸ್ ಯಂತ್ರಗಳಿದ್ದು ಎರಡನ್ನು ಮಾತ್ರ ಉಪಯೋಗಿಸಲಾಗುತ್ತಿದೆ. ಇನ್ನುಳಿದ ಯಂತ್ರಗಳನ್ನು ಚಲಾವಣೆ ಮಾಡಲು ಜಾಗ ಹಾಗೂ ಸಿಬ್ಬಂದಿ ಕೊರತೆಯಿದೆ. ಕಾಯಂ ಸಿಬ್ಬಂದಿ ಇಲ್ಲದ ಕಾರಣ ರಾತ್ರಿ ಪಾಳಿಗೆ ತೊಂದರೆ ಆಗುತ್ತಿದೆ’ ಎನ್ನುತ್ತಾರೆ ದಾಂಡೇಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲಕುಮಾರ ನಾಯ್ಕ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಅನೇಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ರಕ್ತವನ್ನು ಸ್ಥಾಪಿಸಲಾಗಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಬಾಣಂತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಹಾಸಿಗೆಗಳನ್ನು ಹೆಚ್ಚಿಸಬೇಕು ಎನ್ನುವುದು ಗ್ರಾಮೀಣ ಭಾಗದ ಜನರು ಆಗ್ರಹಿಸುತ್ತಿದ್ದಾರೆ.
ಇಎಸ್ಐ ತಾಯಿ ಮಕ್ಕಳ ಆಸ್ಪತ್ರೆ ಸಾರ್ವಜನಿಕ ಆಸ್ಪತ್ರೆಯೂ ಸೇರಿದರೆ ಸುಮಾರು 10ಕ್ಕೂ ಹೆಚ್ಚು ಎಕರೆ ಜಾಗ ಸಿಗಬಹುದು. ಸುಸಜ್ಜಿತವಾದ ಕಟ್ಟಡ ಇರುವುದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಂಡೇಲಿ ಸೂಕ್ತವಾಗಿದೆ.–ರಾಜೇಸಾಬ ಕೇಸನೂರು, ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ
ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. ತಜ್ಞ ವೈದ್ಯರೂ ಇಲ್ಲ. ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಅಥವಾ ಕ್ರಿಮ್ಸ್ ಸಂಸ್ಥೆಗೆ ಕಳುಹಿಸುತ್ತಿದ್ದಾರೆ– ಪ್ರಶಾಂತ ನಾಯ್ಕ, ಅಂಕೋಲಾ ಸ್ಥಳೀಯ ನಿವಾಸಿ
ಕ್ರಿಮ್ಸ್ ನಲ್ಲಿ ಹೃದ್ರೋಗ ತಜ್ಞರು ಸದ್ಯದಲ್ಲೇ ನೇಮಕಗೊಂಡಿದ್ದು ಕ್ಯಾಥಲ್ಯಾಬ್ ಆರಂಭಕ್ಕೆ ಸಿದ್ಧತೆ ನಡೆದಿದೆ–ಡಾ.ಗಜಾನನ ನಾಯಕ ಕ್ರಿಮ್ಸ್ ನಿರ್ದೇಶಕ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ವಿನೂತನ ಪ್ರತಿಭಟನೆಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆ ಸ್ಥಾಪನೆಗೆ ಮುನ್ನ ಇದ್ದ ಆಸ್ಪತ್ರೆಗೆ ತಜ್ಞರ ನೇಮಕವನ್ನಾದರೂ ಮಾಡಲಿ–ರಾಘು ನಾಯ್ಕ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.