ಹಳಿಯಾಳ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬಹಳ ಜವಾಬ್ದಾರಿಯುತವಾದ ಹಾಗೂ ಪುಣ್ಯದ ಕೆಲಸ. ಆದರೆ ಇಂದು ಆರೋಗ್ಯ ಸೇವೆ ವಾಣಿಜ್ಯೀಕರಣಗೊಂಡಿದೆ. ವೈದ್ಯರು ಎಷ್ಟು ಹಣ ಗಳಿಸಿದ್ದೀರಿ ಎನ್ನುವುದಕ್ಕಿಂತ ಎಷ್ಟು ಜನರ ಸೇವೆ ಮಾಡಿದ್ದೀರಿ’ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಆಡಳಿತ ಸುಧಾರಣೆಯ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಶನಿವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಾಮಾನ್ಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಹಳಿಯಾಳ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ತಾಲ್ಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ರಮೇಶ ಕದಂ ವಿವರಿಸುತ್ತಿದ್ದಂತೆ ತೀವ್ರ ತರಾಟೆಗೆ ತೆಗೆದುಕೊಂಡ ದೇಶಪಾಂಡೆ, ‘ಕಳೆದ ಕೆಲವು ವರ್ಷಗಳಿಂದ ನೀವು ಹಳಿಯಾಳ ಆಸ್ಪತ್ರೆಯಲ್ಲಿ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆಯ ಬಗ್ಗೆ ಒಮ್ಮೆಯೂ ಪ್ರಸ್ತಾವ ಹಾಗೂ ಬೇಡಿಕೆ ಸಲ್ಲಿಸಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ಹಳಿಯಾಳ ಆಸ್ಪತ್ರೆಯಲ್ಲಿ ಎಲ್ಲ ಮೂಲ ಸೌಕರ್ಯ ಒದಗಿಸಲಾಗಿದೆ. ಡಯಾಲಿಸಿಸ್‌ಗಾಗಿ 3 ಯಂತ್ರಗಳನ್ನು ನೀಡಲಾಗಿದೆ. ಅತ್ಯುತ್ತಮ ಆಸ್ಪತ್ರೆಯನ್ನಾಗಿಸುವ ಗುರಿ ನಮ್ಮದಾಗಿದೆ. ಆದರೆ ವೈದ್ಯರೇ ನಿರಾಸಕ್ತಿ ಹೊಂದಿದರೆ ಗುರಿ ತಲುಪಲು ಹೇಗೆ ಸಾಧ್ಯ? ಆಸ್ಪತ್ರೆಯಲ್ಲಿಯ ತೊಂದರೆಗಳನ್ನು ಕೂಡಲೇ ತಿಳಿಸದಿರುವುದು ತಾಲ್ಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಹಾಗೂ ಆಡಳಿತ ಅಧಿಕಾರಿಯ ಅಸಡ್ಡೆತನ ತೋರಿಸುತ್ತದೆ. ಕೂಡಲೇ ವೈದ್ಯಾಧಿಕಾರಿಗಳ ಅಧೀನದಲ್ಲಿ ನೇಮಕ ಮಾಡುವ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಿ’ ಎಂದು ಆದೇಶಿಸಿದರು.
ಜಿಲ್ಲಾ ವೈದ್ಯಾಧಿಕಾರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ, ಆಯುಕ್ತರಿಗೆ ದೂರವಾಣಿ ಕರೆ ಮಾಡಿ, ಹಳಿಯಾಳ ಆಸ್ಪತ್ರೆಯ ತೊಂದರೆಯ ಬಗ್ಗೆ ವಿವರಿಸಿದರು. ಸಿಬ್ಬಂದಿ ನೇಮಕಾತಿಯ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹಳಿಯಾಳ, ದಾಂಡೇಲಿ, ಜೊಯಿಡಾಗಳ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಸಲ್ಲಿಸಲು ಆದೇಶಿಸಿದರು.
ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಸಹ ಕಾಲಕಾಲಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸುಧಾರಣೆಯ ಬಗ್ಗೆ ಅರಿತು ಸುಧಾರಣೆಯ ಕ್ರಮ ಕೈಗೊಳ್ಳಬೇಕು ಎಂದರು. ಆಸ್ಪತ್ರೆಯಲ್ಲಿ ಬಡವರು ಚಿಕಿತ್ಸೆಗೆ ಬಂದಾಗ ಅವರನ್ನು ಗೌರವಯುತವಾಗಿ ಕಂಡು ಚಿಕಿತ್ಸೆ ನೀಡಿ ಎಂದರು.
ಡಯಾಲಿಸಿಸ್ ತಜ್ಞರು ಮುಷ್ಕರದಲ್ಲಿ ತೊಡಗಿದ್ದ ಕಾರಣ ನವೆಂಬರ್ ತಿಂಗಳಲ್ಲಿ ರೋಗಿಗಳಿಗೆ ಡಯಾಲಿಸಿಸ್ ಸೇವೆಯಲ್ಲಿ ಸಮಸ್ಯೆ ಆಗಿತ್ತು ಎಂದು ವೈದ್ಯರು ವಿವರಿಸಿದರು. ‘ಆರೋಗ್ಯ ಸೇವೆಯಲ್ಲಿ ಇರುವವರು ಮುಷ್ಕರದಲ್ಲಿ ತೊಡಗಿಸಿಕೊಳ್ಳಬಾರದು. ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ’ ಎಂದರು.
ಕ್ರಮಕ್ಕೆ ಸೂಚನೆ: ಆಸ್ಪತ್ರೆಯಲ್ಲಿನ ಅರಿವಳಿಕೆ ತಜ್ಞ ವೈದ್ಯ ಕಿರಣ ಹೊನ್ನೆನ್ನವರ ಕಳೆದ ಮೂರು ತಿಂಗಳಿನಿಂದ ಗೈರು ಹಾಜರಾಗಿದ್ದು ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಅವರ ವಿರುದ್ಧ ಕೂಡಲೇ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ದೂರವಾಣಿ ಮೂಲಕ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಆರೋಗ್ಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ ಆರ್.ಎಚ್. ಭಾಗವಾನ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಶುರಾಮ ಘಸ್ತೆ, ಹೆಸ್ಕಾಂ ಅಧಿಕಾರಿ ರವೀಂದ್ರ ಮೆಟಗುಡ್, ಆರೋಗ್ಯ ಸಮಿತಿಯ ಸದಸ್ಯರಾದ ಪ್ರಸಾದ ಹುನ್ಸವಾಡ್ಕರ, ಅಪ್ಪಾಸಾಹೇಬ ಹುಂಡೇಕರ, ದೀಪಾ ತಿಗಡಿಕರ, ಪದ್ಮಾವತಿ ಜಕಾತಿ, ರವಿ ವಡ್ಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.