ADVERTISEMENT

ಕಾರವಾರ: ಪಶು ಆಸ್ಪತ್ರೆಗಳಿಗೆ ‌ಬೇಕಿದೆ ‘ಚಿಕಿತ್ಸೆ’

ಸಿಬ್ಬಂದಿ ಇಲ್ಲದೆ ಪರದಾಡುತ್ತಿರುವ ಇಲಾಖೆ: ಹೈನುಗಾರಿಕೆಯಿಂದ ರೈತರು ವಿಮುಖ

ಗಣಪತಿ ಹೆಗಡೆ
Published 5 ಫೆಬ್ರುವರಿ 2024, 6:17 IST
Last Updated 5 ಫೆಬ್ರುವರಿ 2024, 6:17 IST
ದಾಂಡೇಲಿ ಪಶು ಚಿಕಿತ್ಸಾಲಯದಲ್ಲಿ ಪಶು ವೈದ್ಯರು ಸಾಕು ಪ್ರಾಣಿಗೆ ಚಿಕಿತ್ಸೆ ನೀಡುತ್ತಿರುವುದು
ದಾಂಡೇಲಿ ಪಶು ಚಿಕಿತ್ಸಾಲಯದಲ್ಲಿ ಪಶು ವೈದ್ಯರು ಸಾಕು ಪ್ರಾಣಿಗೆ ಚಿಕಿತ್ಸೆ ನೀಡುತ್ತಿರುವುದು    

ಕಾರವಾರ: ಕೃಷಿ, ಮೀನುಗಾರಿಕೆಯಂತೆಯೇ ಹೈನುಗಾರಿಕೆ ಅವಲಂಬಿಸಿ ಜಿಲ್ಲೆಯ ಬಹುತೇಕ ಜನರು ಜೀವನ ಸಾಗಿಸುತ್ತಾರೆ. ಪ್ರೀತಿಯಿಂದ ಸಲುಹಿದ ಹಸು ಅಸ್ವಸ್ಥಗೊಂಡರೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಗದೆ ಪರಿತಪಿಸುವ ನೂರಾರು ಹೈನುಗಾರರು ಇದ್ದಾರೆ.

ಸಿಬ್ಬಂದಿ ಇಲ್ಲದೆ ನಿಶ್ಶಕ್ತಗೊಂಡಿರುವ ಪಶು ಸಂಗೋಪನೆ ಇಲಾಖೆ, ದುಬಾರಿಯಾಗುತ್ತಿರುವ ಪಶು ಆಹಾರ, ಮೇವಿನ ಕೊರತೆಯ ಕಾರಣಕ್ಕೆ ಹೈನುಗಾರಿಕೆಯಿಂದ ವಿಮುಖಗೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಹತ್ತಾರು ಲಕ್ಷದಷ್ಟು ಹಸುಗಳಿದ್ದ ಕಾಲ ದೂರವಾಗಿದ್ದು, ಸದ್ಯ ಜಿಲ್ಲೆಯಲ್ಲಿ ನಾಲ್ಕು ಲಕ್ಷದಷ್ಟು ಜಾನುವಾರುಗಳು ಉಳಿದಿವೆ.

ಜಿಲ್ಲೆಯ ಬಹುತೇಕ ನಗರ, ಗ್ರಾಮೀಣ ಭಾಗದಲ್ಲಿ ಪಶು ಚಿಕಿತ್ಸಾಲಯಗಳಿದ್ದರೂ ಬಾಗಿಲು ತೆರೆಯಲೂ ಸಿಬ್ಬಂದಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಗೆ ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಮಾಡಲು 617 ಹುದ್ದೆ ಮಂಜೂರು ಮಾಡಿದ್ದ ಸರ್ಕಾರ ಅದರಲ್ಲಿ ಭರ್ತಿ ಮಾಡಿದ್ದು ಕೇವಲ 145 ಮಾತ್ರ. 114 ವೈದ್ಯರು ಇರಬೇಕಿದ್ದ ಜಾಗದಲ್ಲಿ 19 ಮಂದಿ ಮಾತ್ರ ಇದ್ದಾರೆ.

ADVERTISEMENT

ಶಿರಸಿ ತಾಲ್ಲೂಕಿನ ಉಂಚಳ್ಳಿ ಸಮೀಪ ಈಚೆಗೆ ನಿಗೂಢ ರೋಗ ಕಾಣಿಸಿಕೊಂಡ ನಾಲ್ಕು ಹಸುಗಳು ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿವೆ. ಚಿಕಿತ್ಸೆ ಒದಗಿಸಲು ಪಶು ಚಿಕಿತ್ಸಾಲಯದಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು ದೊಡ್ಡ ಸಮಸ್ಯೆಯಾಯಿತು. ತಾಲ್ಲೂಕಿನ ಹಲವೆಡೆ ಕಟ್ಟಡಗಳು, ಉಪಕರಣಗಳು ಇವೆ. ಆದರೆ, ಸಿಬ್ಬಂದಿ ಇಲ್ಲ.

ಯಲ್ಲಾಪುರ ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ಔಷಧ ಸಂಗ್ರಹವಿದ್ದರೂ ಗ್ರಾಮೀಣ ಭಾಗದ ಹೆಚ್ಚಿನ ಪಶು ಚಿಕಿತ್ಸಾಲಯದಲ್ಲಿ ವೈದ್ಯರೇ ಲಭ್ಯವಿಲ್ಲದ ಕಾರಣ ಔಷಧಗಳ ಉಪಯೋಗ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಆಸ್ಪತ್ರೆಯಲ್ಲಿರುವ ಸಹಾಯಕರು ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಔಷಧ ನೀಡುತ್ತಾರೆ. ತಾಲ್ಲೂಕಿನ ಕಿರವತ್ತಿ, ಮದನೂರು ಭಾಗದಲ್ಲಿ ಪರಂಪರಾಗತವಾಗಿ ಹೈನುಗಾರಿಕೆ ಮಾಡಿಕೊಂಡು ಬಂದಿರುವ ದನಗರಗೌಳಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದರೂ ಪಶು ವೈದ್ಯರಿಲ್ಲದೆ ತೊಂದರೆ ಎದುರಾಗಿದೆ.

ಹಳಿಯಾಳ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ತೊಂದರೆಯಾಗಬಾರದೆಂದು ಮೈತ್ರಿ ಯೋಜನೆಯಡಿ ಆಯಾ ಭಾಗದ ಯುವಕ, ಯುವತಿಯರಿಗೆ ತರಬೇತಿ ನೀಡಿ ಜಾನುವಾರುಗಳಿಗೆ ಲಸಿಕೆ ಕೊಡುವುದು ಚಿಕ್ಕಪುಟ್ಟ ಚಿಕಿತ್ಸೆ, ಮನೆ ಬಾಗಿಲಿಗೆ ತೆರಳಿ ಕೃತಕ ಗರ್ಭಧಾರಣೆ ಸೇವೆ ಒದಗಿಸಲಾಗುತ್ತಿದೆ.

‘ಸಿಬ್ಬಂದಿ ಕೊರತೆ ನಡುವೆಯೂ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಬೇಸಿಗೆಯಲ್ಲಿ ಮೇವಿನ ಕೊರತೆ ಎದುರಾಗಬಹುದು ಎಂಬ ಕಾರಣಕ್ಕೆ ಮೇವು ಖರೀದಿಸಿ ದಾಸ್ತಾನು ಮಾಡಿಡಲಾಗಿದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ನದಾಫ್.

ಜೊಯಿಡಾ ತಾಲ್ಲೂಕಿನ ಬಹುತೇಕ ಕುಟುಂಬಗಳು ಹೈನುಗಾರಿಕೆಯನ್ನು ಉಪಕಸುಬು ಆಗಿಸಿಕೊಂಡಿವೆ. ಜಗಲಬೇಟ, ಬಾಪೇಲಿ, ಅಸು ಮತ್ತು ಪ್ರದಾನಿ ಭಾಗದಲ್ಲಿ ದನಗರ ಗೌಳಿ ಸಮುದಾಯದವರು ಅಧಿಕ ಸಂಖ್ಯೆಯಲ್ಲಿ ಕುರಿ, ಕೋಳಿ ಹಾಗೂ ಎಮ್ಮೆ ಸಾಕಣೆ ಮಾಡುತ್ತಾರೆ. ಪಶುಗಳು ಅನಾರೋಗ್ಯಕ್ಕೆ ತುತ್ತಾದರೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರುಗಳಿವೆ. ಪಶು ಅಸ್ಪತ್ರೆಗೆ ಆಂಬ್ಯುಲೆನ್ಸ್ ಇದ್ದರೂ ನಿರ್ವಹಣೆಗೆ ವೈದ್ಯರಿಲ್ಲ.

ಗೋಕರ್ಣದಲ್ಲಿ ಪಶು ಆಸ್ಪತ್ರೆ ಇದ್ದರೂ, ಕೆಲವು ವರ್ಷಗಳಿಂದ  ವೈದ್ಯರಿಲ್ಲ. ಪಶುಗಳಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಲಾಗದ ಹಿನ್ನೆಲೆಯಲ್ಲಿ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.

‘ಗೋಕರ್ಣದಲ್ಲಿ ಪಶು ವೈದ್ಯರಿಲ್ಲ ಎಂದು ಮೇಲಾಧಿಕಾರಿಗಳಲ್ಲಿ ನಮ್ಮ ಸಮಸ್ಯೆ ಹೇಳಿದರೆ, ಅವರು ಹೊಸ ವೈದ್ಯರ ನಿಯುಕ್ತಿಗೆ ಹಣಕಾಸಿನ ಆಯೋಗದ ಒಪ್ಪಿಗೆ ಬೇಕು ಎಂದು ತಮ್ಮದೇ ಸಮಸ್ಯೆ ಹೇಳುತ್ತಾರೆ’ ಎನ್ನುತ್ತಾರೆ ನಾಗರಾಜ ಜೋಗಭಟ್.

ಭಟ್ಕಳ ತಾಲ್ಲೂಕಿನಲ್ಲಿರುವ ಪಶು ಆಸ್ಪತ್ರೆಗಳಿಗೆ ಕಟ್ಟಡವೇನೋ ಇದೆ, ಆದರೆ ಸಿಬ್ಬಂದಿಯೇ ಇಲ್ಲ. ಮುರ್ಡೇಶ್ವರದ ಪಶು ಆಸ್ಪತ್ರೆಯಲ್ಲಿ ಕಂಪೌಂಡರ ವೈದ್ಯನಾದರೇ, ಬೆಂಗ್ರೆ ಹಾಗೂ ಬೈಲೂರಿನಲ್ಲಿ ಜವಾನರೇ ವೈದ್ಯರಾಗಿದ್ದಾರೆ. ಸರ್ಕಾರದಿಂದ ಕಾಲಕಾಲಕ್ಕೆ ಪಶು ಆಸ್ಪತ್ರೆಗೆ ಔಷಧಿ, ಚುಚ್ಚುಮದ್ದು ಸರಬರಾಜಾಗುತ್ತಿದ್ದರೂ ಅದನ್ನು ನೀಡಲು ವೈದ್ಯರಿಲ್ಲ.

‘ಭಟ್ಕಳದ ಪಶು ಆಸ್ಪತ್ರೆಯಲ್ಲಿ ಮಾತ್ರ ವೈದ್ಯರಿದ್ದು, ಬೇರೆ ಎಲ್ಲಾ ಕಡೆ ಸಿಬ್ಬಂದಿ, ವೈದ್ಯರ ಕೊರತೆ ಇದೆ. ಚುಚ್ಚುಮದ್ದು ಲಸಿಕೆಯನ್ನು ಕಾಲಕಾಲಕ್ಕೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಪಶು ವೈದ್ಯಾಧಿಕಾರಿ ಡಾ.ಶಿವಕುಮಾರ ಹೇಳುತ್ತಾರೆ.

ಹಳಿಯಾಳ ತಾಲ್ಲೂಕಿನ ಜನಗಾ ಗ್ರಾಮದ ಕೃಷಿಭೂಮಿಗೆ ತೆರಳಿ ಪಶುವೈದ್ಯಾಧಿಕಾರಿ ಡಾ.ಕೆ.ಎಂ. ನದಾಫ್ ಹಸುವಿಗೆ ಚಿಕಿತ್ಸೆ ನೀಡಿದರು

ದಾಂಡೇಲಿಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭವಾಗಿದೆ. ಆದರೆ ಅದರ ನಿರ್ವಹಣೆಗೆ ಬೇಕಿದ್ದ ವೈದ್ಯರೇ ಇಲ್ಲ.

‘ಗ್ರಾಮೀಣ ಪ್ರದೇಶದಲ್ಲಿ ಜಾನುವಾರು ತಪಾಸಣೆಗೆ ತುರ್ತು ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಆಂಬ್ಯುಲೆನ್ಸ್ ಸೇವೆ ಮೂಲಕ ಜಾನುವಾರು ತಪಾಸಣೆಗೆ ಹೋಗುತ್ತೇವೆ. ಜಾನುವಾರುಗಳಿಗೆ ಬರುವ ಚರ್ಮ ಗಂಟು ರೋಗಕ್ಕೆ ಚುಚ್ಚು ಮದ್ದು ನೀಡಲಾಗಿದೆ’ ಎನ್ನುತ್ತಾರೆ ಜಾನುವಾರು ವೈದ್ಯ ಎಂ.ಎಂ.ಕಳ್ಳಮನಿ.

ಹೊನ್ನಾವರ ಪಟ್ಟಣದಲ್ಲಿರುವ ಹಳೆಯ ಕಟ್ಟಡದಲ್ಲಿಯೇ ತಾಲ್ಲೂಕು ಪಶು ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ

ಸಿದ್ದಾಪುರ ತಾಲ್ಲೂಕಿನ 13 ಪಶು ಆಸ್ಪತ್ರೆಗಳ ಪೈಕಿ ಎರಡು ಕಡೆ ಮಾತ್ರ ವೈದ್ಯರಿದ್ದಾರೆ. ಇದರಿಂದ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗುತ್ತಿದೆ.

ಹೊನ್ನಾವರ ತಾಲ್ಲೂಕು ಕೇಂದ್ರದಲ್ಲಿರುವ ಪಶು ಚಿಕಿತ್ಸಾಲಯದ ಜಾಗ ಪರಭಾರೆಯಾಗಿದ್ದು, ಆಸ್ಪತ್ರೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿರುವ ಜತೆಗೆ ಚತುಷ್ಪಥ ಹೆದ್ದಾರಿಗಾಗಿ ಕಟ್ಟಡದ ಮುಂಭಾಗ ನೆಲಸಮವಾಗುವ ಆತಂಕ ಕೂಡ ಎದುರಾಗಿದೆ. ಪಟ್ಟಣದ ಆಸ್ಪತ್ರೆಯ ಹೊರತಾಗಿ ಮಂಕಿ, ಹಳದೀಪುರ, ಕೆಕ್ಕಾರ, ಕುದ್ರಿಗಿ ಸೇರಿದಂತೆ ಒಟ್ಟೂ 10 ಗ್ರಾಮಗಳಲ್ಲಿ ಉಪ ಕೇಂದ್ರಗಳಿವೆ. ಒಬ್ಬರೇ ಪಶು ವೈದ್ಯಾಧಿಕಾರಿಯಿದ್ದಾರೆ.

ಮುಂಡಗೋಡ ತಾಲ್ಲೂಕಿನ ಬಡ್ಡಿಗೇರಿ ಕ್ರಾಸ್‌ ಸಮೀಪದಲ್ಲಿರುವ ಪಶು ಆಸ್ಪತ್ರೆಯ ಕಟ್ಟಡ

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಮೋಹನ ನಾಯ್ಕ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಎಂ.ಜಿ.ಹೆಗಡೆ.

ಅಂಕಿ–ಅಂಶ

ಇಲಾಖೆಯಲ್ಲಿ ಅಗತ್ಯ ಸೌಲಭ್ಯಗಳಿವೆ. ಆದರೆ ಸಿಬ್ಬಂದಿ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ
ಡಾ.ಮೋಹನಕುಮಾರ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ
ಹಳ್ಳಿಗಳ ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲದೆ ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಗದ ಅಸಹಾಯಕ ಸ್ಥಿತಿ ಎದುರಾಗಿದೆ
ವೆಂಕಟೇಶ ನಾಯ್ಕ ಉಂಚಳ್ಳಿ ಹೈನುಗಾರ
ಒಣ ಹುಲ್ಲಿನ ದರ ಒಂದೇ ಸಮನೆ ಏರುತ್ತಿದೆ. ಕಳೆದ ವರ್ಷ ಒಂದು ಜೀಪ್ ಒಣ ಹುಲ್ಲಿಗೆ ₹7 ಸಾವಿರ ಇತ್ತು ಈಗ ಅದಕ್ಕೆ ₹15 ಸಾವಿರ ದರ ಇದೆ
ಮಹಾಬಲೇಶ್ವರ ಬೆಳಸೇರು ಹೈನುಗಾರ
ಜಾನುವಾರುಗಳಿಗೆ ಸಂಬಂಧಿಸಿದಂತೆ ಯಾವುದೇ ಚಿಕಿತ್ಸಾ ಸೌಲಭ್ಯಗಳು ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಔಷಧಿ ಸಾಮಾಗ್ರಿಗಳು ಇದ್ದರೂ ನಮಗೆ ನೀಡಲು ಯಾರಿಲ್ಲ
ಬಾಬು ಜಾನಕರ ಆಡಾಳಿ ನಿವಾಸಿ
ಜೊಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ಪಶು ಆಸ್ಪತ್ರೆ
‘ಡಿ’ ದರ್ಜೆಯ ನೌಕರ ಪಶು ವೈದ್ಯ!
ಮುಂಡಗೋಡ ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಗಳಿದ್ದರೂ ಸಿಬ್ಬಂದಿ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ಕೆಲವೆಡೆ ಸುಸಜ್ಜಿತ ಕಟ್ಟಡಗಳಿದ್ದರೂ ವೈದ್ಯರ ಕೊರತೆಯಿದೆ. ಇನ್ನೂ ಕೆಲವೆಡೆ ‘ಡಿ’ ದರ್ಜೆಯ ಸಿಬ್ಬಂದಿಯೇ ಪಶು ಆಸ್ಪತ್ರೆ ತೆರೆಯುವ ಕೆಲಸ ಮಾಡುತ್ತಿದ್ದಾರೆ. ಮೂಲ ಪಶುಪಾಲನೆ ಕಸುಬು ಮಾಡಿಕೊಂಡು ಬಂದಿರುವ ದನಗರ ಗೌಳಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗುಂಜಾವತಿ ಕಳಕಿಕೇರಾ ಗೋದ್ನಾಳ ಬಸನಾಳ ಯರೇಬೈಲ್‌ ಕುಸೂರ ಕೆಂದಲಗೇರಿ ಬಸನಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪಶು ಆಸ್ಪತ್ರೆಯ ಸೌಲಭ್ಯಕ್ಕೆ ಬೇಡಿಕೆ ಇದೆ.

‘ಬಡ್ಡಿಗೇರಿ ಕ್ರಾಸ್‌ ಸನಿಹ ಸುಸಜ್ಜಿತ ಪಶು ಆಸ್ಪತ್ರೆ ಇದ್ದರೂ ಬಾಗಿಲು ತೆರೆಯುವುದು ಅಪರೂಪ. ವೈದ್ಯರು ಹಾಗೂ ಸಿಬ್ಬಂದಿ ಸಮಸ್ಯೆ ಬಹಳಷ್ಟಿದೆ. ಜಾನುವಾರುಗಳಿಗೆ ಏನಾದರೂ ಸಮಸ್ಯೆ ಇದ್ದರೆ ಪಶುವೈದ್ಯರಿಗೆ ದೂರವಾಣಿ ಕರೆ ಮಾಡುತ್ತೇವೆ’ ಎಂದು ಗ್ರಾಮಸ್ಥ ಭಾಗು ಹೇಳಿದರು. ‘ವೈದ್ಯರ ಕೊರತೆಯ ನಡುವೆಯೂ ಇದ್ದ ಸಿಬ್ಬಂದಿಯನ್ನೇ ಸಮರ್ಪಕವಾಗಿ ಬಳಸಿಕೊಂಡು ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.