ಶಿರಸಿ: ಮಾನವನಲ್ಲಿನ ಭಾವ ವಿಕಾರ ಪರಿವರ್ತಿಸುವ ಕಾರ್ಯ ಶ್ರೀಕೃಷ್ಣನ ಚಿಂತನೆಯಿಂದ ಸಾಧ್ಯ ಎಂದು ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರು ಮಾತನಾಡಿದರು. ‘ಶ್ರೀಕೃಷ್ಣನ ಕಥೆ ಎಂದರೆ ಭಾರತದ ಸಾಂಸ್ಕೃತಿಕ ಕಥೆಯಾಗಿದೆ. ಯಾದವ ಕುಲದ ನಾಯಕನಾಗಿದ್ದ ಶ್ರೀಕೃಷ್ಣ ಭಗವದ್ಗೀತೆಯ ಚಿಂತನೆ ಮೂಲಕ ವಿಶ್ವವ್ಯಾಪಿಯಾಗಿದ್ದಾನೆ. ಶ್ರೀಕೃಷ್ಣನಲ್ಲಿ ನಾವೆಲ್ಲ ನಮ್ಮನ್ನು ಕಾಣುತ್ತೇವೆ. ಹಾಗಾಗಿಯೇ ಕೃಷ್ಣನು ಪ್ರತಿಯೊಬ್ಬರ ಜೀವನ ಆವರಿಸಿದ ಭಗವಂತನಾಗಿದ್ದಾನೆ’ ಎಂದರು.
ಶ್ರೀಕೃಷ್ಣನ ವಿಸ್ತಾರ ಆತನ ಚಿಂತನೆಯಷ್ಟೇ ಅಗಾಧವಾಗಿದೆ. ಸೋತ ಮನಸ್ಸಿಗೆ ಬಲ ನೀಡುವ, ಶಾಂತಿ ಸಂದೇಶ ಬಿತ್ತುವ, ಸ್ವಾಭಿಮಾನ ಸಾರುವ, ಸರಳತೆ ಮೆರೆಯುವ, ಎತ್ತರಕ್ಕೆ ಏರಿದರೂ ಮೂಲ ಮರೆಯದ ಮೌಲ್ಯಯುತ ವಿಚಾರ ಅದರಲ್ಲಿ ಅಡಗಿದೆ. ಪ್ರತಿಯೊಬ್ಬರೂ ಕೃಷ್ಣ ಚಿಂತನೆಯ ಸವಿಯನ್ನು ಸವಿಯಬೇಕು ಎಂದು ಹೇಳಿದರು.
ಗ್ರಾಮೀಣ ಬದುಕಿನ ಚಿತ್ರಣಗಳನ್ನು ಶ್ರೀಕೃಷ್ಣನ ಬಾಲಲೀಲೆಯಲ್ಲಿ ಕಾಣಬಹುದು. ಕಾಲಕ್ಕೆ ತಕ್ಕಂತೆ ಬದಲಾದರೂ ತನ್ನ ಮೂಲ, ಸರಳತೆ ಮರೆಯದೆ ಮುನ್ನುಗ್ಗುವ ಚಿಂತನೆಯನ್ನು ಕೃಷ್ಣ ಪ್ರತಿಬಿಂಬಿಸುತ್ತಾನೆ. ಶ್ರೀಕೃಷ್ಣ ಆದರ್ಶ ಪುರುಷನಾಗಿ ಕಾಣುತ್ತಾನೆ. ಈ ಹಿನ್ನೆಲೆಯಲ್ಲಿ ದ್ವಾಪರದಲ್ಲಿನ ಪ್ರಸ್ತುತತೆಯೇ ಇಂದಿಗೂ ಇದೆ. ಕೃಷ್ಣನನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಮಾತ್ರ ನೋಡದೇ ವಿಶ್ವವ್ಯಾಪಿಯಾಗಿ ನೋಡಬೇಕು ಎಂದು ತಿಳಿಸಿದರು. ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ಕೃಷ್ಣ ಭಜನೆ ಪ್ರಸ್ತುತಪಡಿಸಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿಸ್ವಾಗತಿಸಿದರು. ಶ್ರೀಧರ ಹೆಗಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.