ಸಿದ್ದಾಪುರ: ತಾಲ್ಲೂಕಿನ ಕೊರ್ಲಕೈ ಗ್ರಾಮದ ಮಲವಳ್ಳಿಯಲ್ಲಿರುವ ಅತ್ಯಪರೂಪದ, ನೈಸರ್ಗಿಕವಾದ ಕಲ್ಲಿನ ಸಂಕವನ್ನು ಸಂರಕ್ಷಿಸುವ ಬದಲು ಅದರ ಮೂಲ ಸ್ವರೂಪವನ್ನೇ ಬದಲಿಸಲಾಗಿದೆ. ಸುತ್ತಲೂ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದ್ದು, ಪ್ರಾಕೃತಿಕವಾಗಿ ಇದ್ದ ಚಿತ್ರಣವನ್ನು ಸಂಪೂರ್ಣ ಬದಲಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುಮಾರು 45 ಅಡಿ ಉದ್ದ, 4ರಿಂದ 5 ಅಡಿ ಅಗಲ ಹಾಗೂ 2ರಿಂದ 3 ಅಡಿ ದಪ್ಪದ ಸೇತುವೆ ಇದಾಗಿದೆ. ಹೊಳೆಯ ತಳದಿಂದ ಸುಮಾರು 9 ಅಡಿ ಎತ್ತರದಲ್ಲಿ ಪ್ರಕೃತಿ ಸಹಜವಾಗಿ ನಿರ್ಮಾಣವಾಗಿದೆ. ನಿಸರ್ಗದ ಅಚ್ಚರಿಯಾಗಿರುವ ಈ ತಾಣವು, ಕಾಲಕ್ರಮೇಣ ಶಿಥಿಲವಾಗುತ್ತ ಬಂತು. ಹಾಗಾಗಿ ಅದನ್ನು ಸಂರಕ್ಷಣೆ ಮಾಡುವಂತೆ ಸ್ಥಳೀಯರು, ಈ ಭಾಗದ ಶಾಸಕರೂ ಆಗಿರುವ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದರು.
ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯ ಪಡೆದು, ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಲ್ಸಂಕ ರಕ್ಷಣೆಗೆ ಯೋಜನಾ ವರದಿ ಸಿದ್ಧಪಡಿಸುವಂತೆ ಶಿವಮೊಗ್ಗದ ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರಕ್ಕೆ ಅವರು ಸೂಚಿಸಿದ್ದರು. ಈ ಕಾಮಗಾರಿಗೆ ಸರ್ಕಾರವು ₹ 25 ಲಕ್ಷ ಅನುದಾನ ಮಂಜೂರು ಮಾಡಿತ್ತು. ಸಹ್ಯಾದ್ರಿ ಪ್ರಾಧಿಕಾರವು ಸಂರಕ್ಷಣಾ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿತು.
ನಿಸರ್ಗ ನಿರ್ಮಿತ ಸೇತುವೆಯ ಅಕ್ಕಪಕ್ಕ ಈಗ ಕಾಂಕ್ರೀಟ್ ಗೋಡೆಗಳನ್ನು ಕಟ್ಟಲಾಗಿದೆ. ಹೊಳೆಯಲ್ಲಿದ್ದ ಕಲ್ಲು ಬಂಡೆಗಳನ್ನು ಒಡೆದು, ಸುತ್ತಮುತ್ತಲಿನ ಮರಗಿಡಗಳನ್ನು ಕತ್ತರಿಸಿ ಹಾಕಲಾಗಿದೆ. ಈಗ ಇಲ್ಲಿ ಮೇಲ್ನೋಟಕ್ಕೆ, ನೈಸರ್ಗಿಕ ಕಲ್ಲಿನ ಸಂಕದ ಬದಲು ಕಾಂಕ್ರೀಟ್ ಮೋರಿಯಂತೆ ಕಾಣುತ್ತಿದೆ.
ಕಾಮಗಾರಿ ಇಷ್ಟೆಲ್ಲ ಪ್ರಗತಿಯಾಗಿದ್ದರೂ ಸ್ಥಳೀಯ ಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿಲ್ಲ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಹಚ್ಚಹಸಿರಿನ ನಡುವೆ ಕಂಗೊಳಿಸುತ್ತಿದ್ದ ನೈಸರ್ಗಿಕ ಸೇತುವೆಯು ಈಗ ಮರಗಳ ನೆರಳನ್ನೂ ನೋಡದೇ ಸಂಪೂರ್ಣ ಕಾಂಕ್ರೀಟ್ ಮಯವಾಗಿ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ನಾವು ಬಾಲ್ಯದಿಂದಲೂ ಇಲ್ಲಿನ ಕಲ್ಸಂಕವನ್ನು ನೋಡುತ್ತಿದ್ದೇವೆ. ಮೊದಲಿನ ಹಾಗೂ ಈಗಿನ ಚಿತ್ರಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಅಮಾಯಕ ಮರಗಳ ಮೇಲೆ ಮನುಷ್ಯ ಯಾಕೆ ಸೇಡು ಸೇರಿಸಿಕೊಳ್ಳುತ್ತಾನೆಂದು ಅರ್ಥವಾಗುವುದಿಲ್ಲ. ಮುಳ್ಳು ಪೊದೆಗಳನ್ನು ಮಾತ್ರ ಕಡಿದು ಸಾಂಪ್ರದಾಯಿಕ ಮರಗಳನ್ನು ಉಳಿಸಿದ್ದರೆ ಸಂಕದ ಮೆರುಗು ಹಾಳಾಗುತ್ತಿರಲಿಲ್ಲ. ಕಲ್ಸಂಕ ಮುಳ್ಳುಹಂದಿ ಮತ್ತು ನವಿಲುಗಳ ತಾಣವಾಗಿತ್ತು. ಈಗ ಅವು ಅಲ್ಲಿಂದ ದೂರ ಹೋಗಿವೆ. ಹೊಳೆಯ ಸಿಮೆಂಟ್ ಗೋಡೆಗಳಿಗೆ ಕೊಟ್ಟ ಗಮನ ಸಾಂಪ್ರದಾಯಿಕ ಶಿಲೆಗೆ ಕೊಡಲಿಲ್ಲ. ಇದು ಬಹಳ ಬೇಸರ ತರಿಸುತ್ತಿದೆ’ ಎಂದು ಸ್ಥಳೀಯ ನಿವಾಸಿ ಎನ್.ಜಿ.ಹೆಗಡೆ ಹೇಳುತ್ತಾರೆ.
‘ಎರಡನೇ ಹಂತದಲ್ಲಿ ನೈಸರ್ಗಿಕ ರೂಪ’:
‘ಮಲವಳ್ಳಿಯಲ್ಲಿ ಕಲ್ಸಂಕದ ಸಂರಕ್ಷಣೆಗೆ ಕೇವಲ ಮೊದಲ ಹಂತದ ಕಾಮಗಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಆ ಪ್ರದೇಶಕ್ಕೆ ನೈಸರ್ಗಿಕ ರೂಪವನ್ನು ಪುನಃ ಕೊಡುವ ಕಾಮಗಾರಿಗಳು ನಡೆಯಲಿವೆ’ ಎಂದು ನಿರ್ಮಿತಿ ಕೇಂದ್ರದ ಶಿರಸಿ ವಿಭಾಗದ ಎಂಜಿನಿಯರ್ ಕುಮಾರ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
‘ಸಹ್ಯಾದ್ರಿ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ, ಶಿವಮೊಗ್ಗ ವಿಶ್ವವಿದ್ಯಾಲಯದ ಭೂಗರ್ಭಶಾಸ್ತ್ರಜ್ಞರ ಸಲಹೆಯನ್ನು ಪಡೆದು ಕಾಮಗಾರಿಯನ್ನು ನಡೆಸಲಾಗಿದೆ. ಮಳೆಗಾಲದ ನೀರಿನ ರಭಸಕ್ಕೆ ಪ್ರಮುಖವಾದ ಕಲ್ಲಿನ ಸೇತುವೆಗೆ ಧಕ್ಕೆಯಾಗದ ರೀತಿಯಲ್ಲಿ ಕಲ್ಲು ಬಂಡೆಗಳನ್ನು ತೆರವುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.