ಯಲ್ಲಾಪುರ:‘ಈ ಕ್ಷೇತ್ರದ ಶಾಸಕರಾಗಿದ್ದ ಹೆಬ್ಬಾರ್ ಅನರ್ಹರಾಗಿದ್ದಾರೆ. ಅನರ್ಹ ಎಂದರೆ ನಾಲಾಯಕ್ ಎಂದರ್ಥ. ಮತದಾರರಿಗೆ ಗೌರವ ನೀಡದವರಿಗೆ ಮತ ಹಾಕಬಾರದು. ಜನರಿಗೆ, ಪಕ್ಷದ ನಾಯಕರಿಗೆ ಚೂರಿ ಹಾಕಿದವರನ್ನು ಮನೆಗೆ ಕಳುಹಿಸಬೇಕು. ಆ ಮೂಲಕ ರಾಜಕೀಯ ಶುದ್ಧೀಕರಣ ಆಗಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
‘ಹೆಬ್ಬಾರ್ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಡುವಾಗ ಬಂದು ನಿಮ್ಮನ್ನು ಕೇಳಿದ್ರಾ ? ನಿಮ್ಮನ್ನು ಅಗೌರವದಿಂದ ನಡೆಸಿಕೊಂಡವರಿಗೆ ಮತ್ತೆ ಮತ ಹಾಕಬೇಕಾ?’ ಹೀಗೆಂದು ಸೇರಿದ್ದ ಜನರನ್ನು ಪ್ರಶ್ನಿಸಿದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.
ತಾಲ್ಲೂಕಿನ ಕಿರವತ್ತಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು, ಜನರೊಂದಿಗೆ ಸಂವಾದಿಸುತ್ತ ಭಾಷಣ ಮಾಡಿದರು.
ಆಪರೇಷನ್ ಕಮಲದ ಪಿತಾಮಹ ಯಡಿಯೂರಪ್ಪ. ಅಧಿಕಾರಕ್ಕಾಗಿ ಅವರು ಶಾಸಕರನ್ನು ಖರೀದಿಸಿದ್ದಾರೆ. ಹೆಬ್ಬಾರ್ ಸುಖಾಸುಮ್ಮನೆ ಬಿಜೆಪಿಗೆ ಹೋಗಿಲ್ಲ. ಪ್ರವಾಹ ಬಂದು ಕಷ್ಟದಲ್ಲಿದ್ದಾಗ ಹೆಬ್ಬಾರ್ ಬರಲಿಲ್ಲ, ಯಡಿಯೂರಪ್ಪ ಕೂಡ ಬರಲಿಲ್ಲ. ಬೆಳೆ ಪರಿಹಾರ, ಮನೆಗೆ ಪರಿಹಾರ ಹಣ ಕೊಟ್ಟಿಲ್ಲ. ದಲಿತರು, ಹಿಂದುಳಿದವರ ಸಮಸ್ಯೆಗೆ ಪರಿಹಾರ ಕಲ್ಪಿಸದೇ, ಈಗ ಉಪಚುನಾವಣೆ ನಡೆಸುವ ಸಂದರ್ಭ ಸೃಷ್ಟಿಸಿ ಮತ ಕೇಳಲು ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಡಿಸಲು ಅನೇಕ ತೊಡಕುಗಳು ಎದುರಾದವು. ಆದರೂ, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಬಿಟ್ಟಿಲ್ಲ. ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಅತಿಕ್ರಮಣದಾರರಿಗೆ ಪರಿಹಾರ ಒದಗಿಸುವ ಸಂಬಂಧ, ಸದನದಲ್ಲಿ ಪ್ರಶ್ನೆ ಎತ್ತಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ಇಡೀ ರಾಜ್ಯ ಸಂಕಷ್ಟದಲ್ಲಿರುವ ಚುನಾವಣೆ ನಡೆಸಿ, ಜನರ ಮೇಲೆ ಭಾರ ಹಾಕಲಾಗುತ್ತಿದೆ. ಚುನಾವಣೆಯ ಹಣವನ್ನು ಅಭಿವೃದ್ಧಿಗೆ ಬಳಕೆ ಮಾಡಬಹುದಿತ್ತು’ ಎಂದರು.
ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪ್ರಮುಖರಾದ ಪ್ರಮೋದ ಮಧ್ವರಾಜ್, ಯೋಗೀಶ, ರಮಾನಂದ ನಾಯಕ, ಜೆ.ಡಿ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.