ADVERTISEMENT

ಕನ್ನಡ ಅಭಿರುಚಿ ಬೆಳೆಸಿದ ‘ಸಹಿ ಅಭಿಯಾನ’

ಕುಗ್ರಾಮ ಅಣಶಿ ಶಾಲೆಯಲ್ಲೊಂದು ವಿಶಿಷ್ಟ ಪ್ರಯೋಗ

ಗಣಪತಿ ಹೆಗಡೆ
Published 7 ನವೆಂಬರ್ 2024, 0:10 IST
Last Updated 7 ನವೆಂಬರ್ 2024, 0:10 IST
<div class="paragraphs"><p>ಅಣಶಿ ಶಾಲೆಯ ವಿದ್ಯಾರ್ಥಿಗಳು ಕನ್ನಡದಲ್ಲೇ ಸಹಿ ಮಾಡಿದ್ದನ್ನು ಗೋಡೆಗೆ ಅಂಟಿಸಿರುವುದು</p></div>

ಅಣಶಿ ಶಾಲೆಯ ವಿದ್ಯಾರ್ಥಿಗಳು ಕನ್ನಡದಲ್ಲೇ ಸಹಿ ಮಾಡಿದ್ದನ್ನು ಗೋಡೆಗೆ ಅಂಟಿಸಿರುವುದು

   

ಕಾರವಾರ: ಜೊಯಿಡಾ ತಾಲ್ಲೂಕಿನ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡದಲ್ಲೇ ಸಹಿ ಮಾಡುತ್ತಾರೆ. ಶಾಲೆಯ ಗೋಡೆಗಳ ಮೇಲೆ ಕನ್ನಡದಿಂದಲೇ ಸಹಿ ಮಾಡಿದ ಹತ್ತಾರು ಪೋಸ್ಟರ್ ಅಂಟಿಸಿರುವುದು ಕಾಣಸಿಗುತ್ತದೆ.

ಕೊಂಕಣಿ ಭಾಷಿಕರೇ ಹೆಚ್ಚಿರುವ ಅಣಶಿ ಕುಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಕನ್ನಡದ ಅಕ್ಷರ ಬರೆಯಲು ಪರದಾಡುತ್ತಿದ್ದ ವಿದ್ಯಾರ್ಥಿಗಳು, ಈಗ ಕನ್ನಡದ ಅಕ್ಷರದಲ್ಲೇ ಸಹಿ ಮಾಡುವ ಮಟ್ಟಿಗೆ ಭಾಷೆಯ ಬರವಣಿಗೆ ಸರಿಪಡಿಸಿಕೊಂಡಿದ್ದಾರೆ. ಶಾಲೆಯ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆ ಆರಂಭಿಸಿದ ‘ಕನ್ನಡ ಸಹಿ ಅಭಿಯಾನ’ ಫಲ ಕೊಟ್ಟಿದೆ.

ADVERTISEMENT

ಅಣಶಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 81 ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 1ನೇ ತರಗತಿಯ ಮೂವರನ್ನು ಹೊರತುಪಡಿಸಿದರೆ, ಉಳಿದ 78 ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸಹಿ ಮಾಡುವುದು ರೂಢಿಯಾಗಿದೆ.

‘ಅಣಶಿ ಭಾಗದಲ್ಲಿ ಬಹುಜನರಿಗೆ ಕೊಂಕಣಿ ಮಾತೃಭಾಷೆ ಆಗಿದ್ದು, ಮನೆಯಲ್ಲಿ ಮಕ್ಕಳು ಕನ್ನಡ ಮಾತನಾಡುವುದು ಕಡಿಮೆ. ಶಾಲೆಗೆ ಬಂದ ಆರಂಭದ ದಿನಗಳಲ್ಲಿ ಕನ್ನಡ ಮಾತನಾಡಲು, ಬರೆಯಲು ಅವರಿಗೆ ಕಷ್ಟವಾಗುತಿತ್ತು. ಅದಕ್ಕೆ ಕನ್ನಡ ಸಹಿ ಅಭಿಯಾನದ ಮೂಲಕ ಕನ್ನಡ ಬರಹ ಕಲಿಸಲು ಆರಂಭಿಸಿದೆವು. ಈಗಲೂ ಪ್ರತಿದಿನ ಕೆಲ ನಿಮಿಷ ಸಹಿ ಮತ್ತು ಬರಹ ಸುಧಾರಣೆಗೆ ಮೀಸಲಿಡಲಾಗಿದೆ’ ಎಂದು ಶಾಲಾ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯಲ್ಲಿನ ನಾವು ನಾಲ್ವರು ಶಿಕ್ಷಕರು ಕನ್ನಡದಲ್ಲೇ ಸಹಿ ಮಾಡುತ್ತ, ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆವು. ಕಳೆದ ವರ್ಷ ಶಾಲೆಗೆ ಭೇಟಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮತ್ತು ಆಗಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕನ್ನಡದಲ್ಲೇ ಸಹಿ ಮಾಡಿ, ಮಕ್ಕಳನ್ನು ಪ್ರೋತ್ಸಾಹಿಸಿದ್ದರು’ ಎಂದರು.

ಅಣಶಿ ಶಾಲೆಯ ವಿದ್ಯಾರ್ಥಿಗಳು ಕನ್ನಡದಲ್ಲೇ ಸಹಿ ಮಾಡಿದ್ದನ್ನು ಗೋಡೆಗೆ ಅಂಟಿಸಿರುವುದು
ಜೊಯಿಡಾ ತಾಲ್ಲೂಕಿನ ಅಣಶಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಂಗೋಲಿ ಚಿತ್ತಾರ ಬಿಡಿಸಿ ಕನ್ನಡದಲ್ಲಿ ಸಹಿ ಮಾಡಿದರು
ಅಕ್ಷತಾ ಕೃಷ್ಣಮೂರ್ತಿ

Quote - ಅಣಶಿ ಭಾಗದಲ್ಲಿ ಮಕ್ಕಳು ಕನ್ನಡದಲ್ಲೇ ಸಹಿ ಮಾಡುವುದು ಕಂಡು ಅವರ ಪಾಲಕರಿಗೂ ಕನ್ನಡ ಕಲಿಕೆ ಬಗ್ಗೆ ಆಸಕ್ತಿ ಮೂಡಿದೆ. ಅವರಿಗೂ ಕೂಡ ನೆರವಾಗುತ್ತಿದ್ದೇವೆ. ಅಕ್ಷತಾ ಕೃಷ್ಣಮೂರ್ತಿ ಶಿಕ್ಷಕಿ ಅಣಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

‘ಸುಂದರ ಅಕ್ಷರ ನೋಡಿ ಖುಷಿ’
‘ಕೊಂಕಣಿ ಭಾಷಿಕರು ಹೆಚ್ಚಿರುವ ಈ ಭಾಗದಲ್ಲಿ ಕನ್ನಡ ಕಲಿಸಲು ಶಾಲೆಯ ಶಿಕ್ಷಕರು ಕೈಗೊಂಡ ಪರಿಶ್ರಮ ಫಲ ಕೊಟ್ಟಿದೆ. ಶಾಲೆಯ ವಿದ್ಯಾರ್ಥಿಗಳು ಸಹಿ ಮಾಡುತ್ತಲೇ ಕನ್ನಡ ಅಕ್ಷರಗಳನ್ನು ಸುಂದರವಾಗಿ ಬರೆಯಲು ಕಲಿತಿದ್ದು ನೋಡಿ ಖುಷಿಯಾಗುತ್ತದೆ' ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ ಅಣಶಿಕರ ಹೇಳಿದರು. ಶಿಕ್ಷಕರಾದ ಮೋಹನ ಗೌಡ, ಅತಿಥಿ ಶಿಕ್ಷಕಿಯರಾದ ರೂಪಾ ಮಡಿವಾಳ ಹಾಗೂ ಸುಜಾತಾ ಅಣಶಿಕರ್ ಅವರು ಈ ಸಹಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.