ADVERTISEMENT

ಜಲ ಜೀವನಕ್ಕೆ ನೀರ ಅಬಾವ

ಬೋರ್ ವೆಲ್‍ಗಳಲ್ಲಿ ಬತ್ತುತ್ತಿರುವ ನೀರು

ರಾಜೇಂದ್ರ ಹೆಗಡೆ
Published 3 ಮೇ 2024, 5:24 IST
Last Updated 3 ಮೇ 2024, 5:24 IST
ಶಿರಸಿಯ ಕೊಪ್ಪದಲ್ಲಿ ಜಲಜೀವನ ಕಾಮಗಾರಿ ಪ್ರಗತಿಯಲ್ಲಿರುವುದು
ಶಿರಸಿಯ ಕೊಪ್ಪದಲ್ಲಿ ಜಲಜೀವನ ಕಾಮಗಾರಿ ಪ್ರಗತಿಯಲ್ಲಿರುವುದು   

ಶಿರಸಿ: ಮನೆ ಮನೆಗೂ ನೀರು ಪೂರೈಸುವ ಕೇಂದ್ರ ಸರ್ಕಾರದ ಯೋಜನೆ ಜಲಜೀವನ್ ಮಿಷನ್‌ನ ‘ಹರ್‌ಫ‌ರ್ ಜಲ್ ಜಲೋತ್ಸವದ’ ನೀರಿನ ಮೂಲಗಳು ಬತ್ತತೊಡಗಿದ್ದು, ಯೋಜನೆಯಡಿ ನಳ ಸಂಪರ್ಕ ಪಡೆದವರ ಆತಂಕ ಹೆಚ್ಚಿಸಿದೆ. 

ತಾಲ್ಲೂಕು ಈ ಬಾರಿಯ ಬರಗಾಲಕ್ಕೆ ತತ್ತರಿಸಿದೆ. ಅಂತರ್ಜಲ ಸಿಗುತ್ತಿಲ್ಲ. ಕೆರೆಕಟ್ಟೆಗಳು, ಜಲಮೂಲಗಳು ಬತ್ತಿವೆ. ನೀರು ಸಿಕ್ಕಿದರೂ ಸಾಕಷ್ಟು ಪ್ರಮಾಣದಲ್ಲಿ ನೀರಿನ ಒರತೆ ಕಂಡುಬರುತ್ತಿಲ್ಲ. ಜೀವಜಲಕ್ಕಾಗಿ ಯೋಜನೆಯಡಿ 50ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಲಾಗಿದೆ. ಕೆಲವೆಡೆ  ಕಾಮಗಾರಿ ನಡೆಯುತ್ತಿದ್ದು, ಪೈಪ್ ಅಳವಡಿಸಲಾಗುತ್ತಿದೆ. ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಅಲ್ಪ ಪ್ರಮಾಣದಲ್ಲಿ ನೀರಿನ ಒರತೆ ಸಿಕ್ಕಿರುವ ಬೋರ್‌ಗಳಿಂದ ಮನೆ ಮನೆಗೂ ನೀರು ಪೂರೈಸಲು ಸಾಧ್ಯವೇ ಎಂಬ ಸಂಶಯ ಈಗ ಕಾಡುತ್ತಿದೆ. ಹಲವು ಬೋರ್‌ಗಳು ನೀರು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದು, ನೀರು ಪೂರೈಕೆ ತಾಲ್ಲೂಕಾಡಳಿತಕ್ಕೆ ಸವಾಲಾಗುವ ಸಾಧ್ಯತೆಯಿದೆ.

ಜೆಜೆಎಂಗೆ ಆರಂಭದಲ್ಲೇ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಈಗಿರುವ ಕುಡಿಯುವ ನೀರಿನ ಮೂಲ ಬಿಟ್ಟು ಮತ್ತೆಲ್ಲೋ ಬೋರ್‌ವೆಲ್ ಕೊರೆಸಿ ನೀರು ಕೊಡುವುದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿ, ಯೋಜನೆ ಸ್ಥಗಿತಕ್ಕೆ ಆಗ್ರಹಿಸಿದ್ದರು. ಆದರೆ, ಕೇಂದ್ರದ ಯೋಜನೆ ಆಗಿರುವುದರಿಂದ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯ ಕೂಡ ಆಗಿದೆ. ಹೀಗಾಗಿ ಅಡೆತಡೆಗಳ ನಡುವೆಯೂ ಕೆಲವೆಡೆ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಕಾಮಗಾರಿ ಮುಗಿದ ಕಡೆ ನೀರಿನ ಸಮಸ್ಯೆ ತಲೆದೋರಿರುವುದು ಅಧಿಕಾರಿ ವರ್ಗಕ್ಕೆ ತಲೆನೋವು ತಂದಿದೆ. 

ADVERTISEMENT

ತಾಲ್ಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 40, ಎರಡನೇ ಹಂತದಲ್ಲಿ 33 ಹಾಗೂ ಮೂರನೇ ಹಂತದಲ್ಲಿ 46 ಜೆಜೆಎಂ ಕಾಮಗಾರಿಗಳನ್ನು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕೈಗೆತ್ತಿಕೊಂಡಿತ್ತು. ಬಹುತೇಕ ಕಾಮಗಾರಿಗಳಿಗೆ ಬೋರ್‌ವೆಲ್ ಮೂಲಕ ನೀರು ಪೂರೈಸಲು
ನಿರ್ಧರಿಸಲಾಗಿತ್ತು. ಆದರೆ, ಹಲವು ಕಡೆ ಬೋರ್‌ಗಳು ವಿಫಲವಾಗಿವೆ. ಕೆಲವು ಕಡೆ ಸಫಲವಾಗಿದ್ದರೂ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ. ಹೀಗಾಗಿ ಆರಂಭದಲ್ಲಿ ನೀರು ಪೂರೈಸಿದರೂ ಕ್ರಮೇಣ ಅಂತಹ ಬೋರ್‌ಗಳು ಬತ್ತಿ ಹೋಗುತ್ತಿವೆ’ ಎಂಬುದು ಯೋಜನೆಯ ಫಲಾನುಭವಿಗಳ ಮಾತಾಗಿದೆ. 

‘ಈಗಾಗಲೇ ಮೊದಲ ಹಂತದಲ್ಲಿನ ಕಾಮಗಾರಿ ಮುಗಿದು ನೀರು ನೀಡಲಾಗಿತ್ತು. ಆದರೀಗ ಯೋಜನೆಯಡಿ ಸಂಪರ್ಕ ಕಲ್ಪಿಸಿದ್ದ ಬೋರ್‌ವೆಲ್ ನಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. ಓವರ್ ಹೆಡ್ ಟ್ಯಾಂಕ್‌ಗೆ ನೀರು ಹೋಗುವುದು ಇಳಿದಿದೆ. ಇದೇ ರೀತಿಯಾದರೆ ಬೇರೆಡೆಯಿಂದ ನಾವು ಕುಡಿಯಲು ನೀರು ತರಬೇಕಾಗುತ್ತದೆ’ ಎನ್ನುತ್ತಾರೆ ಕೊಪ್ಪದ ನಿವಾಸಿ ಕೃಷ್ಣ ಹೆಗಡೆ.  

‘ಎಲ್ಲ ಕಾಮಗಾರಿಗಳು  ಯಶಸ್ವಿಯಾಗಲಿವೆ ಎಂದು ಇಲಾಖೆ ಹೇಳುತ್ತಿದ್ದರೂ, ಮನೆ ಮನೆಗೆ ನೀರು ಬಂದು ತಲುಪಿದ ಮೇಲೆಯೇ ಅಸಲಿಯತ್ತು ಬಯಲಾಗಿಲಿದೆ’ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.