ಶಿರಸಿ: ‘ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಜಿತ ಮನೋಚೇತನಾ ಸಂಸ್ಥೆ 18 ವರ್ಷಗಳಿಂದ ಸೇವೆ, ಶಿಸ್ತು, ನಿರಂತರತೆ ಕಾಪಾಡಿಕೊಂಡು 210 ತಪಾಸಣಾ ಶಿಬಿರ ನಡೆಸಿದೆ. ಇದು ಸಮಾಜ ಕಟ್ಟುವ ಕಾರ್ಯದಲ್ಲಿ ಮಹತ್ತರ ಕೊಡುಗೆಯಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಅಜಿತ ಮನೋಚೇತನಾದಲ್ಲಿ ಈಚೆಗೆ 210ನೇ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ‘ವಿಶೇಷ ಮಕ್ಕಳ ಶಾಲೆಗೆ ಬಿಸಿಯೂಟ ನೀಡಲು ಸರ್ಕಾರ ಮಟ್ಟದಲ್ಲಿ ಇನ್ನುಷ್ಟು ಒತ್ತಡ ಹಾಕಲಾಗುವುದು. ಕೇಂದ್ರ ಸರ್ಕಾರಕ್ಕೆ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವ ಸಲ್ಲಿಸಿ. ಅಜಿತ ಮನೋಚೇತನಾದ ಸಮಾಜ ಸೇವಾ ಕಾರ್ಯಕರ್ತರು ಅಭಿನಂದನೆಗೆ ಅರ್ಹರು. ಡಾ.ಶ್ರೀನಿವಾಸ ಕುಲಕರ್ಣಿ ಅವರು ಪ್ರತಿ ತಿಂಗಳೂ ಸಮಯ ನೀಡಿದ್ದಾರೆ. ಅವರಿಗೆ ನೀಡಿರುವ ವಿಶೇಷ ಸನ್ಮಾನ ಯೋಗ್ಯ ಕಾರ್ಯ’ ಎಂದು ಶ್ಲಾಘಿಸಿದರು.
ಹಿಂದು ಸೇವಾ ಪ್ರತಿಷ್ಠಾನದ ಸಂಚಾಲಕ ಸುಧಾಕರಜೀ ಮಾತನಾಡಿದರು. ಸಂಸ್ಥೆಯ ಟ್ರಸ್ಟಿ ಡಾ.ಜಿ.ಎಂ.ಹೆಗಡೆ ಅವರು ಡಾ.ಶ್ರೀನಿವಾಸ ಕುಲಕರ್ಣಿ ಅವರಿಗೆ ಸನ್ಮಾನ ಮಾಡಿದರು. ಶಿಕ್ಷಣ ತಜ್ಞ ಕೇಶವ ಕೊರ್ಸೆ ಅವರು ಪಾಲಕರ ಜತೆ ಸಂವಾದ ನಡೆಸಿದರು. ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಅನಂತ ಹೆಗಡೆ ಆಶೀಸರ ಸ್ವಾಗತಿಸಿದರು. ನರ್ಮದಾ ಹೆಗಡೆ ನಿರ್ವಹಿಸಿದರು. ಸಮೂಹ ಗೀತೆಯನ್ನು ಸುಮಿತ್ರಾ ಸಂಯೋಜಿಸಿದರು. ಗೋಪಾಲ ಇಟಗುಳಿ ವಂದಿಸಿದರು. ವಿಶೇಷ ಮಕ್ಕಳು ತಯಾರಿಸಿದ ವಸ್ತುಗಳ ಪ್ರದರ್ಶಿನಿ ಗಮನ ಸೆಳೆಯಿತು.
ಆಯುಷ್ ಕಿಟ್‍ಗಳನ್ನು ಉದಯ ಸ್ವಾದಿ ವಿತರಿಸಿದರು. ವಿಶೇಷ ಮಕ್ಕಳಿಗೆ ತಪಾಸಣಾ ಶಿಬಿರದಲ್ಲಿ ಉಚಿತ ಔಷಧಿ ನೀಡಲಾಯಿತು. ಸ್ಪೇಶಲ್ ಒಲಿಂಪಿಕ್ಸ್, ತರಬೇತಿ ಕಾರ್ಯಾಗಾರ ಡಿಸೆಂಬರನಲ್ಲಿ ನಡೆಯಲಿದೆ ಎಂದು ಪ್ರಕಟಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.