ಶಿರಸಿ: ಅಂಗನವಾಡಿ ಮಕ್ಕಳಿಗೆ ನೀರಿನ ವ್ಯವಸ್ಥೆಗೆ ಪೂರಕವಾಗಿ ಒಂಟಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶನಗರದ ಗೌರಿ ನಾಯ್ಕ ಅವರಿಗೆ ತೋಡುತ್ತಿರುವ ಬಾವಿ ಮುಚ್ಚುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ಹಾಗೂ ಸೂಪರ್‌ವೈಸರ್ ಸ್ಥಳಕ್ಕೆ ಭೇಟಿ ನೀಡಿ ಬಾವಿ ತೋಡುವುದನ್ನು ನಿಲ್ಲಿಸಿ, ಮುಚ್ಚುವಂತೆ ಸೂಚಿಸಿದ್ದಾಗಿ ಗೌರಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
'ಅಂಗನವಾಡಿಯ ಹಿಂದೆ ಬಾವಿ ತೋಡುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ದೊರಕಿತ್ತು. ಬಾಲ ವಿಕಾಸ ಸಮಿತಿಯಲ್ಲೂ ಬಾವಿ ತೋಡುವ ಬಗ್ಗೆ ಠರಾವು ಮಾಡಲಾಗಿತ್ತು. ಜತೆಗೆ, ಬಾವಿ ತೋಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಇದೀಗ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣ ನೀಡಿ ಬಾವಿ ತೋಡಲು ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದರು.
‘ಅಂಗನವಾಡಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇಲಾಖೆ ಉಪನಿರ್ದೇಶಕಿ ಹುಲಿಗೆಮ್ಮ ಅವರ ಆದೇಶದ ಹಿನ್ನೆಲೆಯಲ್ಲಿ ಬಾವಿ ತೋಡುವುದನ್ನು ನಿಲ್ಲಿಸಬೇಕು, ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬಾವಿಯ ಸುತ್ತ ರಕ್ಷಣೆ ಜತೆ ಸೂಕ್ತ ಅನುಮತಿ ಪಡೆದುಕೊಂಡರೆ ಬಾವಿ ತೆಗೆಯಲು ತೊಂದರೆಯಿಲ್ಲ’ ಎನ್ನುತ್ತಾರೆ ಸಿಡಿಪಿಒ ವೀಣಾ ಶಿರ್ಸಿಕರ್.
ಕಳೆದ ಎರಡು ವಾರಗಳಿಂದ ಗೌರಿ ನಾಯ್ಕ ಗಣೇಶನಗರದ ಅಂಗನವಾಡಿ ಕೇಂದ್ರ–6ರ ಹಿಂದುಗಡೆ ಒಂಟಿಯಾಗಿ ಬಾವಿ ತೋಡುವ ಕಾರ್ಯದಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.