ADVERTISEMENT

ಶಿರಸಿ | ಮಳೆ: ಅಡಿಕೆ ಒಣಗಿಸಲು ರೈತರು ಹೈರಾಣ

ರಾಜೇಂದ್ರ ಹೆಗಡೆ
Published 21 ಅಕ್ಟೋಬರ್ 2024, 6:40 IST
Last Updated 21 ಅಕ್ಟೋಬರ್ 2024, 6:40 IST
ಮಳೆ ಹಾಗೂ ಮೋಡದ ಹಿನ್ನೆಲೆಯಲ್ಲಿ ಒಣಗಿಸಲು ಅವಕಾಶವಿಲ್ಲದೆ ಅಡಿಕೆಯನ್ನು ಒಂದೆಡೆ ರಾಶಿ ಹಾಕಿರುವುದು 
ಮಳೆ ಹಾಗೂ ಮೋಡದ ಹಿನ್ನೆಲೆಯಲ್ಲಿ ಒಣಗಿಸಲು ಅವಕಾಶವಿಲ್ಲದೆ ಅಡಿಕೆಯನ್ನು ಒಂದೆಡೆ ರಾಶಿ ಹಾಕಿರುವುದು    

ಶಿರಸಿ: ಆಗಾಗ ಸುರಿವ ಮಳೆ, ಮೋಡಕವಿದ ವಾತಾವರಣದ ನಡುವೆ ಹಣ್ಣಡಿಕೆ (ಗೋಟಡಿಕೆ) ಒಣಹಾಕಲು ಸಮಸ್ಯೆ ಎದುರಾಗಿದ್ದು, ಬಿಸಿಲಿನ ಕಾವು ಇಲ್ಲದೆ ಮುಗ್ಗತೊಡಗಿದೆ. ಇದರಿಂದ ಒಳಗಿನ ಅಡಿಕೆ ಕಪ್ಪಾಗುವ ಆತಂಕ ಬೆಳಗಾರರನ್ನು ಕಾಡುತ್ತಿದೆ.

ಅತಿವೃಷ್ಟಿಯ ಕಾರಣಕ್ಕೆ ಅಡಿಕೆ ಬೆಳೆ ಕೊಳೆಯಿಂದ ಭಾಗಶಃ ನಾಶವಾಗಿದೆ. ಪ್ರಸ್ತುತ ವಾಯುಭಾರ ಕುಸಿತದ ಕಾರಣದಿಂದ ಪ್ರತಿ ದಿನ ಸುರಿಯುವ ಮಳೆ, ಮೋಡದ ವಾತಾವರಣವು ಅಳಿದುಳಿದ ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರತೊಡಗಿದೆ. ಬಿದ್ದ ಅಡಿಕೆ ಹೆಕ್ಕಿ ಒಣಗಿಸಲು ಅಡ್ಡಿ ಒಂದೆಡೆಯಾದರೆ, ಹಣ್ಣಡಿಕೆ ಕೊಯ್ಲು ಮಾಡಿ ಒಣಹಾಕಲು ಮೋಡದ ವಾತಾವರಣ ತಡೆಯಾಗುತ್ತಿರುವುದು ರೈತರ ಆತಂಕ ಹೆಚ್ಚಲು ಕಾರಣವಾಗಿದೆ.  

ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ನವೆಂಬರ್‌ ಆರಂಭದಿಂದ ಹಸಿ ಅಡಿಕೆ ಕೊಯ್ಲ ಆರಂಭವಾಗುತ್ತದೆ. ಅದಕ್ಕೂ ಪೂರ್ವ ಹಣ್ಣಾದ ಅಡಿಕೆ ಕೊಯ್ಲು ಮಾಡಲಾಗುತ್ತದೆ. ಪ್ರಸ್ತುತ ಹಲವು ತೋಟಗಳಲ್ಲಿ ಅಡಿಕೆ ಶೇ 30ರಷ್ಟು ಹಣ್ಣಾಗಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಹಲವು ರೈತರು ಮೊದಲ ಹಂತದ ಗೋಟಡಿಕೆ ಕೊಯ್ಲು ಆರಂಭಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ನಿರಂತರ ಮಳೆಯ ಕಾರಣಕ್ಕೆ ಅಡಿಕೆ ಹಣ್ಣಾಗಿ ನೆಲಕ್ಕೆ ಬೀಳುತ್ತಿದ್ದು, ಕೊಯ್ಲು ಮಾಡಲು ಆಗದೇ, ಹಾಗೆಯೇ ಬಿಡಲೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ರೈತರು ಹಣ್ಣಡಿಕೆ ಕೊಯ್ಲು ಮಾಡಿ ನೇರವಾಗಿ ಮಾರುಕಟ್ಟೆಗೆ ತಂದು ಟೆಂಡರ್ ವ್ಯವಸ್ಥೆ ಮೂಲಕ ಮಾರುತ್ತಿದ್ದರೆ, ಇನ್ನೂ ಕೆಲ ರೈತರು ಮಳೆ ಬಿಡುವಿಗಾಗಿ ಕಾಯುತ್ತಿದ್ದಾರೆ. 

ADVERTISEMENT

‘ಅಡಿಕೆ ಹಣ್ಣಾಗಿ ತೋಟದಲ್ಲಿ ಉದುರುತ್ತಿವೆ. ಹಣ್ಣಾದ ಅಡಿಕೆ ಮರದಲ್ಲಿಯೇ ಬಿಡುವಂತೆಯೂ ಇಲ್ಲ. ಬಿದ್ದ ಅಡಿಕೆ ಹೆಕ್ಕಿ ತಂದರೂ ಮಳೆಯ ಕಾರಣಕ್ಕೆ ಒಣಗಿಸಲು ಸಮಸ್ಯೆ. ಒಂದೊಮ್ಮೆ ಒಣಹಾಕಿದರೂ ಗುಣಮಟ್ಟದ ಚಾಲಿಯ ಬದಲು ಕಪ್ಪು ಬಣ್ಣದ ಚಾಲಿಯಾಗುತ್ತವೆ’ ಎನ್ನುತ್ತಾರೆ ಬೆಳೆಗಾರರು. 

‘ತೋಟದಲ್ಲಿ ಉದುರಿದ ಹಣ್ಣಡಿಕೆ ಆರಿಸಿ ಮನೆಗೆ ತಂದರೆ ಒಣಗಿಸಲು ವ್ಯವಸ್ಥೆ ಇಲ್ಲ. ಹಣ್ಣಡಿಕೆ ಒಣಗುವುದಕ್ಕೆ ಕನಿಷ್ಠ 20 ದಿನ ಮತ್ತು ಸುಲಿದ ಹಸಿ ಕಾಯಿ ಅಡಿಕೆ ಒಣಗುವುದಕ್ಕೆ ಕನಿಷ್ಠ 10 ದಿನ ಉತ್ತಮ ಬಿಸಿಲು ಇರಬೇಕು. ಆದರೆ ಪ್ರಸ್ತುತ ಒಂದು ದಿನ ಕೂಡ ಸಾಕಷ್ಟು ಬಿಸಿಲು ಬರುತ್ತಿಲ್ಲ ಎಂಬ ಪರಿಸ್ಥಿತಿ ಇದೆ. ಬೆರಳೆಣಿಕೆಯ ಕೆಲವೇ ಬೆಳೆಗಾರರು ಮಾತ್ರ ಅಡಿಕೆ ಒಣಗಿಸುವುದಕ್ಕೆ ಡ್ರೈಯರ್‌ ಅಥವಾ ಪಾಲಿಹೌಸ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಬಹುಪಾಲು ಬೆಳೆಗಾರರು ಇನ್ನೂ ಬಿಸಿಲನ್ನೇ ಅವಲಂಬಿಸಿದ್ದಾರೆ. ಇಂಥವರೆಲ್ಲ ಈಗ ಅಡಿಕೆ ಒಣಗಿಸುವುದಕ್ಕೆ ಪರದಾಡುತ್ತಿದ್ದಾರೆ. ಮತ್ತೆ ಮತ್ತೆ ಸುರಿಯುತ್ತಿರುವ ಮಳೆ ಬೆಳೆಗಾರರು ಕಂಗಾಲಾಗುವಂತೆ ಮಾಡುತ್ತಿದೆ’ ಎನ್ನುತ್ತಾರೆ ಬೆಳೆಗಾರ ಕೇಶವ ಹೆಗಡೆ.

ಗೋಟಡಿಕೆ ಒಣಗಿಸಲು ಗಟ್ಟಿಯಾದ ಬಿಸಿಲು ಬೇಕು. ಆದರೆ ಹಾಲಿ ವಾತಾವರಣ ಬೆಳೆಗಾರರಿಗೆ ಕೈಕೊಡುತ್ತಿದ್ದು ಅಡಿಕೆಯ ಗುಣಮಟ್ಟ ಹಾಳಾಗುತ್ತಿದೆ
ಗಿರಿಯಾ ಗೌಡ ಅಡಿಕೆ ಬೆಳೆಗಾರ
ಗೋಟಡಿಕೆಯನ್ನು ಕೊಯ್ಲು ಮಾಡಿ ನೇರವಾಗಿ ಸಹಕಾರಿ ಸಂಘಕ್ಕೆ ತಂದರೆ ಟೆಂಡರ್ ಮೂಲಕ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ
ಜಿ.ಎಂ.ಹೆಗಡೆ ಮುಳಖಂಡ ಟಿಎಂಎಸ್ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.