ಶಿರಸಿ: ಮಳೆ ಹೆಚ್ಚಿದಂತೆ ಕೊಳೆ ರೋಗದ ಜತೆಗೆ ಎಳೆಯ ಅಡಿಕೆ ಉದುರುವ ಪ್ರಮಾಣ ಅಡಿಕೆ ತೋಟದಲ್ಲಿ ತೀವ್ರವಾಗಿದೆ. ಹೆಚ್ಚುವರಿ ಮದ್ದು ಸಿಂಪಡಣೆಗೆ ಮಳೆಯೇ ಅಡ್ಡಿಯಾಗಿದ್ದು, ಬೆಳೆಗಾರರು ಇದರಿಂದ ಕಂಗೆಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಅಡಿಕೆ ಬೆಳೆಯೇ ಪ್ರಧಾನ ಬೆಳೆಯಾಗಿದ್ದು, ಹೆಚ್ಚಿನ ಕೃಷಿಕರು ಈ ಬೆಳೆ ನಂಬಿಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಎಲೆಚುಕ್ಕೆ ಬಾಧೆ ಅಡಿಕೆ ಕೃಷಿಕರನ್ನು ಕಂಗೆಡಿಸಿದೆ. ಇದರ ಜತೆ ಪ್ರತಿ ವರ್ಷ ಕೊಳೆ ರೋಗದ ಕಾಟ. ಇವುಗಳ ನಡುವೆ ಈಗ ಎಳೆಯ ಅಡಿಕೆ ತೀವ್ರತರದಲ್ಲಿ ಉದುರುತ್ತಿರುವುದು ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಶಿರಸಿ ತಾಲ್ಲೂಕಿನ ಮತ್ತಿಘಟ್ಟ, ದೇವನಮನೆ, ಬನವಾಸಿ, ಹೆಗಡೆಕಟ್ಟಾ, ಸಾಲಕಣಿ, ಕಂಡ್ರಾಜಿ, ಬಿಸಲಕೊಪ್ಪ, ಕಕ್ಕಳ್ಳಿ ಭಾಗದಲ್ಲಿ ಎಳೆಯ ಹಸಿ ಅಡಿಕೆ ಉದುರುವ ಪ್ರಮಾಣ ಹೆಚ್ಚಿದೆ. ಮುಂಡಗೋಡದ ಕೊಪ್ಪ, ಚಿಗಳ್ಳಿ ಸೇರಿ ಕೆಲಭಾಗ, ಯಲ್ಲಾಪುರ ಹಾಗೂ ಸಿದ್ದಾಪುರ ತಾಲ್ಲೂಕುಗಳಲ್ಲಿಯೂ ಈ ಸಮಸ್ಯೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿದೆ.
‘ಎಲೆಚುಕ್ಕಿ ರೋಗದಿಂದ ಎಂಟು ಸಾವಿರ ಎಕರೆಯಲ್ಲಿನ ಅಡಿಕೆ ಮರಗಳು ಈಗಾಗಲೇ ಜೀವಸತ್ವ ಕಳೆದುಕೊಂಡಿವೆ. ಆದರೂ ರೋಗ ಹತೋಟಿಗೆ ಬಂದಿಲ್ಲ. ಕೊಳೆರೋಗ ಪ್ರತೀ ವರ್ಷ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಗ ಕೀಟ ಬಾಧೆ ಎಂದು ಈಗಾಗಲೇ ಎರಡಕ್ಕೂ ಹೆಚ್ಚು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದರೂ ಎಳೆಯ ಅಡಿಕೆ ಉದುರುವುದು ನಿಂತಿಲ್ಲ. ಅಡಿಕೆ ಎಳೆಯದಾಗಿರುವ ಪರಿಣಾಮ ಅವುಗಳನ್ನು ಸುಲಿದು ಒಣಗಿಸಲು ಸಾಧ್ಯವಿಲ್ಲ’ ಎಂಬುದು ರೋಗ ಬಾಧಿತ ತೋಟಗಳ ಬೆಳೆಗಾರರ ಮಾತಾಗಿದೆ.
‘ಒಂದು ಎಕರೆ ತೋಟದಲ್ಲಿನ ಶೇ 30ಕ್ಕೂ ಹೆಚ್ಚು ಮರಗಳಲ್ಲಿ ಎಳೆಯ ಅಡಿಕೆಗಳು ನೆಲಕ್ಕುರುಳಿವೆ. ಈ ಬಾಧೆ ಕಾಣಿಕೊಂಡ ಮರಗಳ ಗೊನೆಗಳಲ್ಲಿ ಅಡಿಕೆಯೇ ಇಲ್ಲದಂತಾಗುತ್ತಿದೆ. ಈಗ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ಮದ್ದು ಸಿಂಪಡಣೆಗೂ ಅವಕಾಶ ಸಿಗುತ್ತಿಲ್ಲ. ಅಡಿಕೆ ಬೆಳೆಯನ್ನೇ ನಂಬಿರುವ ಬೆಳೆಗಾರರಿಗೆ ಏನು ಮಾಡಬೇಕು ಎಂಬುದೇ ಯಕ್ಷಪ್ರಶ್ನೆಯಂತೆ ಕಾಡುತ್ತಿದೆ’ ಎಂಬುದು ಸಾಲಕಣಿ ಭಾಗದ ಅಡಿಕೆ ಬೆಳೆಗಾರ ನರಸಿಂಹ ಹೆಗಡೆ ಮಾತು.
‘ಅತಿಯಾದ ಬೇಸಿಗೆ ನಂತರ ಹೆಚ್ಚಿನ ಮಳೆಯ ಸಂದರ್ಭದಲ್ಲಿ ಅಡಿಕೆ ಉದುರುತ್ತದೆ. ಇದರ ಜತೆ ಪೆಂಟಾಮಿಡ್ ಕೀಟ ಬಾಧೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಅತಿಯಾಗಿ ಪರಿಣಮಿಸುತ್ತದೆ. ಪೋಟ್ಯಾಶಿಯಂ ಕೊರತೆಯ ಕಾರಣಕ್ಕೂ ಎಳೆಯ ಅಡಿಕೆ ಉದುರುವ ಸಾಧ್ಯತೆ ಇದೆ. ಹೀಗೆ ಬಿದ್ದ ಅಡಿಕೆಯನ್ನು ತೋಟಗಾರಿಕಾ ಇಲಾಖೆಗೆ ತಂದರೆ ಪರೀಕ್ಷಿಸಿ ಪರಿಹಾರೋಪಾಯ ಸೂಚಿಸಲಾಗುವುದು’ ಎಂಬುದು ತೋಟಗಾರಿಕಾ ಇಲಾಖೆ ಗಣೇಶ ಹೆಗಡೆ ಅವರು ತಿಳಿಸಿದ್ದಾರೆ.
ಎಲೆಚುಕ್ಕಿ ರೋಗ ಕೊಳೆರೋಗಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡೋ ದ್ರಾವಣ ಈಗಾಗಲೇ ಸಿಂಪಡಿಸಲಾಗಿದೆ. ಆದರೆ ಏಕಾಏಕಿ ಹಸಿ ಅಡಿಕೆ ಉದುರುತ್ತಿದೆ. ಯಾವ ಔಷಧ ಸಿಂಪಡಣೆ ಮಾಡಬೇಕೆಂಬುದೇ ತಿಳಿಯುತ್ತಿಲ್ಲ.–ಅರವಿಂದ ಹೆಗಡೆ, ಅಡಿಕೆ ಬೆಳೆಗಾರ
ಹವಾಮಾನ ವೈಪರೀತ್ಯದಿಂದ ಅಡಿಕೆ ಉದುರು ಹೆಚ್ಚಿದೆ. ಬಿದ್ದ ಅಡಿಕೆ ಪರೀಕ್ಷಿಸಿ ಬೆಳೆಗಾರರಿಗೆ ಪರಿಹಾರಾತ್ಮಕ ಮಾರ್ಗೋಪಾಯ ಸೂಚಿಸಲಾಗುವುದು–ಸತೀಶ ಹೆಗಡೆ, ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.