ಶಿರಸಿ: ‘ಅಡಿಕೆ ಉತ್ಪಾದಕರು ಮತ್ತು ಬಳಕೆದಾರರ ನಡುವೆ ಮಧ್ಯವರ್ತಿಗಳಿದ್ದು, ಅವರ ಮೇಲೆ ಯಾರ ನಿಯಂತ್ರಣ ಇಲ್ಲ. ಅಡಿಕೆಗೆ ಕೆಟ್ಟ ಹೆಸರು ಬರಲು ಇಂಥವರು ಕಾರಣ’ ಎಂದು ಮಲ್ನಾಡ್ ಅರೆಕಾ ಮಾರ್ಕೆಟಿಂಗ್ ಕೋ ಆಪರೇಟಿವ್ ಸೊಸೈಟಿ (ಮ್ಯಾಮ್ಕೊಸ್) ಅಧ್ಯಕ್ಷ ಎಚ್.ಎಸ್. ಮಂಜಪ್ಪ ಹೇಳಿದರು.
ನಗರದಲ್ಲಿ ಶನಿವಾರ ‘ಉತ್ಪಾದನೆಯಿಂದ ಬಳಕೆಯವರೆಗೆ’ ಗುಣಮಟ್ಟದ ಅಡಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವಿಷಯ ಮೂರು ದಶಕಗಳಿಂದ ಚರ್ಚೆಯಾಗುತ್ತಿದೆ. ಪ್ರಕರಣ ಕೋರ್ಟ್‌ನಲ್ಲಿದೆ. ಈ ಬಗ್ಗೆ ಅಂತಿಮ ತೀರ್ಪು ಬಂದಿಲ್ಲ’ ಎಂದರು.
‘ವಿಶ್ವಸಂಸ್ಥೆಯ ಅಂಗ ಸಂಸ್ಥೆಯು ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವರದಿ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಭಾರತದ ಅಡಿಕೆ ವಹಿವಾಟು ಹೆಚ್ಚಿದ್ದು, ಅದನ್ನು ನಿಯಂತ್ರಿಸಲು ಇಂಥ ವರದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇವುಗಳನ್ನು ತಡೆಯಲು ವೈಜ್ಞಾನಿಕ ವರದಿ ಸಿದ್ಧಪಡಿಸುವ ಅಗತ್ಯವಿದೆ’ ಎಂದರು.
‘ಕ್ಯಾನ್ಸರ್‌ಕಾರಕ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಇಲ್ಲ. ಆದರೆ, ಅಡಿಕೆ ಮೇಲೆ ಈ ತೂಗುಗತ್ತಿ ಇದೆ. ಇದಕ್ಕೆ ಅಡಿಕೆ ಬೆಳೆಗಾರರ ಪ್ರಬಲ ಲಾಬಿ ಇಲ್ಲದಿರುವುದು ಕಾರಣ. ಗುಟ್ಕಾ, ಪಾನ್ ಮಸಾಲಾ ಕಂಪನಿಗಳು ನೇರವಾಗಿ ಸಹಕಾರಿ ಸಂಘಗಳ ಬದಲು ಮಧ್ಯವರ್ತಿಗಳಿಂದ ಅಡಿಕೆ ಖರೀದಿಸುತ್ತಾರೆ. ಹೀಗೆ ಮಧ್ಯವರ್ತಿ ಹಂತದಲ್ಲಿ ಅಡಿಕೆ ಕಲಬೆರಕೆ ಸಾಧ್ಯತೆಯಿದ್ದು, ಅಂಥ ಅಡಿಕೆ ಪರೀಕ್ಷಿಸಿದರೆ ಹಾನಿಕಾರಕ ಅಂಶ ಕಂಡುಬರುವ ಸಾಧ್ಯತೆಯಿದೆ’ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಅಡಿಕೆ ಕ್ಯಾನ್ಸರ್‌ಕಾರಕ ಎನ್ನುವ ಷಡ್ಯಂತ್ರದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಸರ್ಕಾರ, ತಜ್ಞರು, ವಿಜ್ಞಾನಿಗಳ ಸಹಕಾರದಿಂದ ವೈಜ್ಞಾನಿಕ ವರದಿ ಸಿದ್ಧಪಡಿಸಬೇಕು. ಸಿಪಿಸಿಆರ್‌ಐ ಕೈಗೊಂಡ ಸಂಶೋಧನೆ ವರದಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಸಹಕಾರಿ ಪ್ರಮುಖರು ನಿಯೋಗದ ಮೂಲಕ ಕೇಂದ್ರ ಸಚಿವರನ್ನು ಭೇಟಿಯಾಗಬೇಕು. ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಾಗುವುದು’ ಎಂದರು.
Cut-off box - ಕಾರ್ಯಾಗಾರದ ನಿರ್ಣಯಗಳು * ಅಡಿಕೆಯ ಸಮಗ್ರ ಗುಣ ಧರ್ಮಗಳ ಕುರಿತು ವಿಸ್ತೃತ ಸಂಶೋಧನೆ ನಡೆಸಬೇಕು * ದೇಶದಲ್ಲಿ ಒಳನುಸುಳುವ ಅಡಿಕೆ ಸಂಪೂರ್ಣ ನಿಷೇಧ ಹೇರಬೇಕು * ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಅಡಿಕೆ ಪೊಟ್ಟಣದ ಮೇಲೆ ಕಡ್ಡಾಯವಾಗಿ ಬರೆಯುವುದು ರದ್ದಾಗಬೇಕು * ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ ಸಮಗ್ರವಾಗಿ ನಿಯಮಾವಳಿ ರೂಪಿಸಿ ಜಾರಿಗೆ ತರಬೇಕು * ಆಹಾರ ವಸ್ತು ಹಾಗೂ ಅಡಿಕೆಯ ಗುಣಮಟ್ಟದ ಮೇಲ್ವಿಚಾರಣೆಗೆ ತಾಲ್ಲೂಕು ಮಟ್ಟದಲ್ಲಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ * ಅಡಿಕೆಯಲ್ಲಿರುವ ಔಷಧೀಯ ಗುಣಗಳನ್ನು ಬಳಸಲು ನೀತಿನಿಯಮಗಳನ್ನು ರೂಪಿಸಬೇಕು * ತಂಬಾಕುರಹಿತ ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳಿಗೆ ಹಾಗೂ ಬದಲಿ ವಾಣಿಜ್ಯ ಉಪಯೋಗಗಳಿಗೆ ಉತ್ತೇಜನ * ಉತ್ಪಾದಕರಿಂದ ಗ್ರಾಹಕರವರೆಗಿನ ಅಡಿಕೆಯ ಸಂಗ್ರಹ ಸಂಸ್ಕರಣೆ ಮಾರಾಟ ಜೋಡಣೆಯಲ್ಲಿ ಸಹಕಾರಿ ರಂಗಕ್ಕೆ ಪ್ರೋತ್ಸಾಹ ನೀಡಬೇಕು. ಇಂತಹ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ ಸಿಗಬೇಕು * ಅಡಿಕೆ ಕುರಿತ ಎಲ್ಲ ನೀತಿ-ನಿಯಮಾವಳಿ ರೂಪಿಸುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರಿ ಸಂಘಟನೆಗಳ ಅಭಿಪ್ರಾಯ ಪಡೆದು ಮುಂದುವರಿಯಬೇಕು * ಅಡಿಕೆ ಬೆಳೆಯುವ ಪ್ರದೇಶದ ಸಹಕಾರಿ ಸಂಘಗಳ ಪ್ರತಿನಿಧಿಗಳನ್ನೂ ಒಳಗೊಂಡಿರುವ ತಜ್ಞರ ಒಂದು ತಾಂತ್ರಿಕ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಬೇಕು * ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಸಮಿತಿ ರಚಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.