ಶಿರಸಿ: ಭೂತಾನ್ ಅಡಿಕೆ ಆಮದು ಹಾಗೂ ಬರ್ಮಾದ ಅಡಿಕೆ ಕಲಬೆರಕೆಯಿಂದಾಗಿ ಮಾರುಕಟ್ಟೆಯಲ್ಲಿ ದರ ಇಳಿಕೆಯ ಹಾದಿಯಲ್ಲಿದೆ. ಇದರಿಂದ ಲಾಭದ ಉದ್ದೇಶಕ್ಕಾಗಿ ಅಡಿಕೆ ಖರೀದಿಸಿ, ದಾಸ್ತಾನಿಟ್ಟುಕೊಂಡಿರುವ ಸಹಕಾರ ಸಂಘಗಳಿಗೆ ಆತಂಕ ಎದುರಾಗಿದೆ.
ಅಡಿಕೆ ಧಾರಣೆಯ ಏರಿಕೆಯಿಂದಾಗಿ ಸಹಕಾರ ಸಂಘಗಳಲ್ಲಿ ಅಡಿಕೆ ವಹಿವಾಟು ಅಧಿಕವಾಗಿದೆ. ಕಳೆದ ಏಳೆಂಟು ವರ್ಷದ ಹಿಂದೆ ಶಿರಸಿಯ ಎಲ್ಲ ಸಹಕಾರ ಸಂಘಗಳ ಒಟ್ಟು ಅಡಿಕೆ ವಹಿವಾಟು 1.80 ಲಕ್ಷ ಕ್ವಿಂಟಲ್‌ನಷ್ಟಿತ್ತು. ಆದರೆ, 2023ನೇ ಸಾಲಿನಲ್ಲಿ 2.90 ಲಕ್ಷ ಕ್ವಿಂಟಲ್‌ಗೆ ವಹಿವಾಟು ಏರಿಕೆಯಾಗಿತ್ತು. ರಾಜ್ಯದ ವಿವಿಧ ಸಹಕಾರ ಸಂಸ್ಥೆಗಳಲ್ಲಿ ಅಂದಾಜು 45 ಲಕ್ಷ ಕ್ವಿಂಟಲ್ಗೂ ಹೆಚ್ಚು ವಹಿವಾಟು ನಡೆದಿದೆ.
ದರ ಕುಸಿತವಾದಾಗ ಸಹಕಾರ ಸಂಘಗಳು ಹೆಚ್ಚಿನ ದರದಲ್ಲಿ ಅಡಿಕೆ ಖರೀದಿಸಿ ರೈತರ ಹಿತ ಕಾಯ್ದುಕೊಂಡು ಬಂದಿವೆ. ಈ ಬಾರಿ ಕೂಡ ರಾಜ್ಯದ ವಿವಿಧ ಸಹಕಾರ ಸಂಘಗಳು ಅಂದಾಜು 2 ಲಕ್ಷ ಕ್ವಿಂಟಲ್ಗೂ ಹೆಚ್ಚು ಅಡಿಕೆ ಖರೀದಿಸಿ ದಾಸ್ತಾನು ಮಾಡಿವೆ. ಆದರೆ, ಈ ವರ್ಷ ಅಡಿಕೆ ಕಲಬೆರಕೆ ಪ್ರಕರಣ, ವಿದೇಶಿ ಅಡಿಕೆ ಹಾವಳಿ, ವರ್ತಕರಿಂದ ದರ ಇಳಿಕೆ ತಂತ್ರದ ಕಾರಣಕ್ಕೆ ಅಡಿಕೆಯ ದರ ಇಳಿಮುಖವಾಗಿದೆ.
ಅಡಿಕೆ ಮಾರುಕಟ್ಟೆಯಲ್ಲಿ 2024ರ ಮೇ ತಿಂಗಳ ಕೊನೆಯವರೆಗೂ ಕ್ವಿಂಟಲ್ ರಾಶಿ ಅಡಿಕೆ ಸರಾಸರಿ ₹50 ಸಾವಿರ, ಚಾಲಿ ಅಡಿಕೆಗೆ ₹48 ಸಾವಿರದಿಂದ ₹49 ಸಾವಿರ ದರ ಇತ್ತು. ಆದರೆ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಹಂಗಾಮಿನ ಅಡಿಕೆಯ ಆವಕ ಹೆಚ್ಚಿದ ಕಾರಣ ದರ ಗಣನೀಯವಾಗಿ ಕುಸಿದಿದೆ.
ಅಡಿಕೆ ದರ ಇಳಿಯುವ ಸಂದರ್ಭದಲ್ಲಿ ದಾಸ್ತಾನಿಟ್ಟ ಉತ್ಪನ್ನ ಮಾರುವುದರಿಂದ ದೊಡ್ಡ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಪ್ರಸ್ತುತ ಸಹಕಾರ ಸಂಘಗಳು 2–3 ತಿಂಗಳಷ್ಟು ದಾಸ್ತಾನಿಟ್ಟುಕೊಳ್ಳುವ ಆರ್ಥಿಕ ಸಾಮರ್ಥ್ಯ ಹೊಂದಿವೆಗೋಪಾಲಕೃಷ್ಣ ವೈದ್ಯ ಟಿಎಸ್ಎಸ್ ಅಧ್ಯಕ್ಷ ಶಿರಸಿ
ಮುಂದುವರಿದ ದರ ಕುಸಿತ
‘ಬಹುತೇಕ ಸಹಕಾರ ಸಂಸ್ಥೆಗಳು ಸ್ಥಿರ ಧಾರಣೆ ನೀಡುವ ಉದ್ದೇಶದಿಂದ ಅಡಿಕೆ ಖರೀದಿ ಮಾಡಿದ್ದವು. ಆಗಸ್ಟ್ ಅಂತ್ಯದ ವೇಳೆಗೆ ರಾಶಿ ಅಡಿಕೆ ಕ್ವಿಂಟಲ್‌ಗೆ ₹45 ಸಾವಿರ ಚಾಲಿ ಅಡಿಕೆ ₹37 ಸಾವಿರಕ್ಕೆ ಕುಸಿತವಾಗಿತ್ತು. ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ದರ ಕುಸಿತ ಜಾಸ್ತಿಯಾಗಿದೆ. ಬುಧವಾರ ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಸರಾಸರಿ ದರ ಕ್ವಿಂಟಲ್‌ಗೆ ₹39737 ಆಗಿದ್ದರೆ ಚಾಲಿ ಅಡಿಕೆಯ ಸರಾಸರಿ ದರ ₹33958 ಆಗಿದೆ’ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕ ಶಿರಸಿಯ ಸೀತಾರಾಮ ಹೆಗಡೆ. ‘ಕಳೆದ ಎರಡು ತಿಂಗಳಿನಿಂದ ಬಹುತೇಕ ಸಹಕಾರ ಸಂಘಗಳು ಸರಾಸರಿ ₹40 ಸಾವಿರದಿಂದ ₹45 ಸಾವಿರ ನೀಡಿ ರಾಶಿ ಹಾಗೂ ಚಾಲಿ ಅಡಿಕೆ ಖರೀದಿಸಿ ದಾಸ್ತಾನಿಟ್ಟಿವೆ. ಈಗ ದರ ತೀವ್ರ ಇಳಿಕೆಯಾಗಿದ್ದು ಮಾರಿದರೆ ನಷ್ಟವಾಗುವ ಆತಂಕ ಎದುರಾಗಿದೆ. ಖರೀದಿಸಿದ ದರ ಬಂದರಷ್ಟೇ ದಾಸ್ತಾನಿಟ್ಟಿರುವ ಅಡಿಕೆ ಮಾರಲು ಸಾಧ್ಯ. ಇಲ್ಲವಾದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ’ ಎಂದು ಸಂಘಗಳ ಪ್ರಮುಖರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.