ADVERTISEMENT

ಶಿರಸಿ: ಆಟೊ ಚಾಲಕ, ಮಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 12:44 IST
Last Updated 17 ಜೂನ್ 2023, 12:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿರಸಿ: ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಿರುವುದರಿಂದ ಆಟೊ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಮಾರಿಕಾಂಬಾ ಆಟೋ ಚಾಲಕರ ಕ್ಷೇಮಾಭೀವೃದ್ಧಿ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಕುರಿತು ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ 7000ಕ್ಕೂ ಹೆಚ್ಚು ಆಟೊ ರಿಕ್ಷಾಗಳಿವೆ. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆಟೊ ಚಾಲನೆ ಮಾಡಿಕೊಂಡು ಬಂದ ಹಣದಲ್ಲಿ ಜೀವನ ನಡೆಸುವುದು ಆಟೊಚಾಲಕ, ಮಾಲೀಕರಿಗೆ ತುಂಬಾ ಕಷ್ಟವಾಗಿದೆ ಎಂದು ಸಂಘದ ಸದಸ್ಯರು ಹೇಳಿದರು.

ಈಗ ಸರ್ಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತ ಪ್ರಯಾಣ ಘೋಷಿಸಿರುವುದರಿಂದ ಆಟೊದವರು ಬಾಡಿಗೆ ಇಲ್ಲದೇ ಪರಿತಪಿಸುವಂತಾಗಿದೆ. ಹೀಗಾಗಿ ಆಟೊ ಚಾಲಕರು, ಮಾಲೀಕರಿಗೆ ದುಡಿಮೆ ಇಲ್ಲದಂತಾಗಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆಟೊ ಖರೀದಿಸಲು ಹೊಸದಾಗಿ ಯಾವುದೇ ಪರ್ಮಿಟ್ ನೀಡಬಾರದು. ಆಟೊವನ್ನು ನಗರ ಪ್ರದೇಶದಿಂದ 20 ಕಿ.ಮೀ ವ್ಯಾಪ್ತಿಗೆ ಚಲಾಯಿಸಲು ಅನುಮತಿ ನೀಡಬೇಕು. ಹೊಸ ಆಟೊ ಖರೀದಿಸಲು ವಿಶೇಷ ಸಬ್ಸಿಡಿ ನೀಡಬೇಕು. ಆಟೊಗಳಿಗೆ ಇರುವ ವಿಮಾ ಪಾಲಿಸಿಗಳಿಗೆ ವಿಶೇಷ ರಿಯಾಯತಿ ಘೋಷಿಸಬೇಕು‌ ಎಂದು ಒತ್ತಾಯಿಸಿದರು.

ADVERTISEMENT

ಆಟೊ ಚಾಲಕ, ಮಾಲೀಕರನ್ನು ಅಸಂಘಟಿತ ವಲಯದಿಂದ ಕಾರ್ಮಿಕ ವರ್ಗಕ್ಕೆ ಸೇರಿಸಿ ಅವರಿಗೆ ಸಿಗುವ ಸರ್ಕಾರಿ ಸೌಲಭ್ಯ ನೀಡಬೇಕು. ಆಟೊ ಚಾಲಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಚಾಲಕ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಸಿಗುವಂತಾಗಬೇಕು. 60 ವರ್ಷಕ್ಕಿಂತ ಮೇಲಿನ ಆಟೊ ಚಾಲಕ, ಮಾಲೀಕರ ಕುಟುಂಬಗಳಿಗೆ ಪಿಂಚಣಿ ಸೌಲಭ್ಯ ದೊರೆಯುವಂತಾಗಬೇಕು. ಪ್ರತಿ ತಿಂಗಳಿಗೆ ಕನಿಷ್ಠ 100 ಲೀಟರ್ ಗ್ಯಾಸ್ ಅಥವಾ ಪೆಟ್ರೋಲ್ ಉಚಿತವಾಗಿ ನೀಡಬೇಕು. ವೈಟ್ ಬೋರ್ಡ್‌ ವಾಹನಗಳು ಅನಧಿಕೃತವಾಗಿ ಬಾಡಿಗೆ ಹೊಡೆಯುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.