ಶಿರಸಿ: ತಾಲ್ಲೂಕಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ದಾಖಲೆ, ತೆರಿಗೆ ಪಾವತಿ ಸೇರಿದಂತೆ ಯಾವೊಂದು ಕೆಲಸವು ತ್ವರಿತವಾಗಿ ಆಗುತ್ತಿಲ್ಲ. ಸರ್ವರ್, ನೆಟ್ವರ್ಕ್ ಸಮಸ್ಯೆ ಸೇರಿ ವಿವಿಧ ತಾಂತ್ರಿಕ ದೋಷದ ಕಾರಣಕ್ಕೆ ಈ ಕೇಂದ್ರಗಳು ಬಹುತೇಕ ಪಂಚಾಯಿತಿಗಳ ಆಡಳಿತ ವ್ಯವಸ್ಥೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಆಧುನಿಕ ತಂತ್ರಜ್ಞಾನದಡಿ ಗ್ರಾಮ ಪಂಚಾಯಿತಿ ಆಡಳಿತದ ವೇಗ ಹೆಚ್ಚಿಸುವ ಸರ್ಕಾರದ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಸಾರ್ವಜನಿಕರ ಕೆಲಸವನ್ನು ಸುಲಭಗೊಳಿಸಲು ಆರಂಭಿಸಿದ ಬಾಪೂಜಿ ಸೇವಾ ಕೇಂದ್ರ ಸೇವೆ ನಿಧಾನವಾಗಿದೆ. ಈ ಕೇಂದ್ರದ ಮೂಲಕ ಡಿಜಿಟಲ್ ಪಾವತಿ ಕ್ರಮ ಪಂಚಾಯಿತಿ ಆಡಳಿತದಲ್ಲಿ ಸುಸೂತ್ರ ಅನುಷ್ಠಾನವಾಗಿಲ್ಲ. ಸುಲಭ ಮಾರ್ಗದಲ್ಲಿ ಆಡಳಿತ ಎಂಬ ಸರ್ಕಾರದ ವಾಗ್ದಾನ ಬಹುತೇಕ ಬುಡಮೇಲಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಅಗತ್ಯ ದಾಖಲೆ, ತೆರಿಗೆ ಪಾವತಿ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಬಾಪೂಜಿ ಸೇವಾ ಕೇಂದ್ರದಲ್ಲಿ ಪೋರ್ಟಲ್, ಆ್ಯಪ್ ಬಳಕೆಯ ಆನ್ಲೈನ್ ವ್ಯವಸ್ಥೆ ಅನುಷ್ಠಾನ ಮಾಡಿದೆ. ಫೋನ್ ಪೇ, ಗೂಗಲ್ಪೇ, ಅಮೆಜಾನ್ ಪೇ, ಪೇಟಿಎಂ, ಬಿಎಚ್ಎಂಯುಪಿಐ ಸೇರಿದಂತೆ ಅನೇಕ ಆಧುನಿಕ ಕ್ರಮಗಳ ಮೂಲಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಜತೆ, ಆನ್ಲೈನ್ ತೆರಿಗೆ ಪಾವತಿ ಕುರಿತಂತೆ ಗ್ರಾಮ ಪಂಚಾಯಿತಿ ಆಡಳಿತ ಪ್ರತ್ಯೇಕ ಬ್ಯಾಂಕ್ ಖಾತೆ ನಿರ್ವಹಣೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
‘ಆದರೆ ಆ್ಯಂಡ್ರಾಯ್ಡ್ ಪಿಒಎಸ್ ಮೆಷಿನ್ ಪಡೆದ ಗ್ರಾಮ ಪಂಚಾಯಿತಿ ಆಡಳಿತದಲ್ಲೂ ಡಿಜಿಟಲ್ ಪಾವತಿಯ ಹೊಸ ಪದ್ಧತಿ ಕ್ರಮಬದ್ಧವಾಗಿ ಕಾರ್ಯಗತವಾಗಿಲ್ಲ. ಹಲವು ಸಬೂಬುಗಳನ್ನು ಹೇಳಿ ಡಿಜಿಟಲ್ ಪಾವತಿ ಬದಲಾಗಿ ನಗದು ಪಡೆಯುವ ಹಳೆ ಕ್ರಮ ಪಾಲಿಸಲಾಗುತ್ತಿದ್ದು, ಸರ್ಕಾರದ ಸೂಚನೆ ಕಾಟಾಚಾರಕ್ಕೆ ಎಂಬಂತಾಗಿದೆ’ ಎಂಬ ದೂರುಗಳು ವ್ಯಾಪಕವಾಗಿವೆ.
ಸೇವಾ ಕೇಂದ್ರದಲ್ಲಿ ಆರ್ಟಿಸಿ, ಜನನ, ಮರಣ ಪ್ರಮಾಣ ಪತ್ರ ಸೇರಿದಂತೆ ಅನೇಕ ಉಪಯುಕ್ತ ದಾಖಲೆಗಳನ್ನು ವಿತರಿಸಲು ಅನುಮತಿ ನೀಡಲಾಗಿದೆ. ಡಿಜಿಟಲ್ ಪಾವತಿ ಮೂಲಕ ಸಂಗ್ರಹಿಸಲಾದ ದಾಖಲೆಗಳ ಸೇವಾ ಶುಲ್ಕ, ತೆರಿಗೆ ಮೊತ್ತ ಸೇರಿದಂತೆ ಸಂಗ್ರಹಿಸುವ ಹಣ ಗ್ರಾಮ ಪಂಚಾಯಿತಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಅವಕಾಶ ಬಾಪೂಜಿ ಸೇವಾ ಕೇಂದ್ರಕ್ಕೆ ಕಲ್ಪಿಸಲಾಗಿದೆ. ಇದಕ್ಕೆ ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದುವುದು ಅವಶ್ಯಕ.
ಆದರೆ, ಬಹುತೇಕ ಕೇಂದ್ರಗಳು ಬ್ಯಾಂಕ್ ಖಾತೆಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸಂಪರ್ಕ ಹೊಂದಿಲ್ಲ. ತ್ವರಿತ ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ತೆರಳಿದರೆ ಸಮಸ್ಯೆಗೆ ಸಿಕ್ಕಿಕೊಳ್ಳಬೇಕಾದ ಸನ್ನಿವೇಶ ಸಾರ್ವಜನಿಕರು ಎದುರಿಸಬೇಕಾಗಿದೆ. ಕುಗ್ರಾಮಗಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಬಾಪೂಜಿ ಸೇವಾ ಕೇಂದ್ರದ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಸೇವೆ ಪರಿಣಾಮಕಾರಿಯಾಗಿ ಸಿಗುತ್ತಿಲ್ಲ. ಕೇಂದ್ರದಲ್ಲಿ ರೈತರಿಗೆ ಆರ್ಟಿಸಿ ದಾಖಲೆಯು ಸರಿಯಾಗಿ ಸಿಗುವುದಿಲ್ಲ. ಕೇಂದ್ರದಲ್ಲಿ ಸಿಗುವ ಹತ್ತಾರು ರೀತಿಯ ತಾಂತ್ರಿಕ ಕಾರಣಗಳ ಉತ್ತರ ತಲೆಬಿಸಿಯಾಗಿ ರೈತರು ಕೇಂದ್ರದತ್ತ ತಲೆ ಹಾಕದಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.
ಬಾಪೂಜಿ ಸೇವಾ ಕೇಂದ್ರದ ತಾಂತ್ರಿಕ ಮಟ್ಟ ಸುಧಾರಣೆ ಮಾಡಬೇಕು. ಕೇಂದ್ರದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಡಿಜಿಟಲ್ ನಗದು ಪಾವತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ವ್ಯವಸ್ಥೆ ರೂಪಿಸಬೇಕು-ಪ್ರಕಾಶ ಭಟ್ ವಾನಳ್ಳಿ, ಸಾಮಾಜಿಕ ಕಾರ್ಯಕರ್ತ
ಬಾಪೂಜಿ ಸೇವಾ ಕೇಂದ್ರದಲ್ಲ ಇಂಟರ್ನೆಟ್ ಬ್ಯಾಂಕಿಂಗ್ ಆನ್ಲೈನ್ ಪಾವತಿಯಲ್ಲಿ ತಾಂತ್ರಿಕವಾಗಿ ಕೆಲವೊಂದು ಸಮಸ್ಯೆ ಎದುರಾಗುತ್ತಿದೆ. ಆದರೂ ಅಗತ್ಯ ದಾಖಲೆಗಳನ್ನು ವಿತರಿಸಲಾಗುತ್ತಿದೆ.-ಸತೀಶ ಹೆಗಡೆ, ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.