ಶಿರಸಿ: ‘ರಾಜ್ಯದಲ್ಲಿ ನಡೆಯುವ ಉಪಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಕೆಳಗಿಳಿಯುವುದು ನಿಶ್ಚಿತ’ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೀಘ್ರ ಪತನವಾಗಲಿದೆ ಎನ್ನಲು ವಿಜಯೇಂದ್ರ ಭವಿಷ್ಯಗಾರರೇ? ಆ ಬಗ್ಗೆ ಅವರು ಮಾತನಾಡುವುದು ಹಾಸ್ಯಾಸ್ಪದ. ಅವರ ರಾಜ್ಯಾಧ್ಯಕ್ಷ ಸ್ಥಾನವೇ ಅಲ್ಲಾಡುತ್ತಿದೆ. ಮೊದಲು ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಗಮನ ನೀಡಲಿ’ ಎಂದು ಟೀಕಿಸಿದರು.
‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ತನಿಖೆ ಮಾಡಿದರೆ ಅವರು ಆರೋಪಿ ಆಗುತ್ತಾರಾ? ಅವರು ಏಕೆ ರಾಜೀನಾಮೆ ನೀಡಬೇಕು? ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ವಿರುದ್ಧ ಅಸಂವಿಧಾನಿಕ ಪದ ಬಳಸುತ್ತಿರುವ ಬಿಜೆಪಿಗರು ಎಚ್ಚರಿಕೆಯಿಂದ ಇರಬೇಕು. ಯಡಿಯೂರಪ್ಪ ಅವರದ್ದೇ ಪೋಕ್ಸೊ ಪ್ರಕರಣ ಇದೆ. ಆ ಬಗ್ಗೆ ಮಾತನಾಡದ ವಿಜಯೇಂದ್ರ ಸಿದ್ದರಾಮಯ್ಯ ಬಗ್ಗೆ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೆ? ಮೊದಲು ಅವರು ಸರಿಯಾಗಲಿ, ಪಕ್ಷ ಸ್ವಚ್ಛ ಮಾಡಿಕೊಳ್ಳಲಿ. ಅದು ಬಿಟ್ಟು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು.
‘ಶಾಸಕ ಸತೀಶ ಸೈಲ್ ಅವರಿಗೆ ಜನಪ್ರತಿನಿಧಿ ಕೋರ್ಟ್‍ನಿಂದ ಶಿಕ್ಷೆ ಪ್ರಕಟವಾಗಿದೆ. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಕಾನೂನಿನಡಿ ಶಿಕ್ಷೆ ಅನುಭವಿಸಲೇ ಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.