ಶಿರಸಿ: ಗಿಡಮರಗಳನ್ನು ಉಳಿಸಿ ಬೆಳೆಸಿ ಪೋಷಿಸುವುದು ನಾಡಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಶಾಲ್ಮಲಾ ಉದ್ಯಾನದಲ್ಲಿ ಅರಣ್ಯ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ, ಬೀಜ ಬಿತ್ತೋತ್ಸವ ಹಾಗೂ ಉದ್ಯಾನದಲ್ಲಿನ ಚಿಟ್ಟೆಗಳ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾಡಿದ್ದರೆ ನಾಡಿಗೆ ನೀರು, ಅನ್ನ ಸಿಗುತ್ತದೆ. ಮಳೆ ಬಂದರೆ ಕೃಷಿಕರು ಬೆಳೆ ಬೆಳೆಯಲು ಸಾಧ್ಯ. ಕಾಡು ಉಳಿದರೆ ಎಲ್ಲರಿಗೆ ಅನ್ನ ಸಿಗಲು ಸಾಧ್ಯ ಎಂದರು.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಜಮೀನುಗಳ ಸುತ್ತಮುತ್ತ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತವಾಗಿ ಬರಗಾಲ ಅಳಿಸಬಹುದಾಗಿದೆ. ಹೆಚ್ಚಿನ ಗಿಡ ನೆಟ್ಟು ಹಸಿರು ಕ್ರಾಂತಿ ನಡೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಕೇವಲ ಅರಣ್ಯ ಇಲಾಖೆ ಅಷ್ಟೇ ಅಲ್ಲದೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗಿಡ ನೆಡಬೇಕು. ಆ ಮೂಲಕ ಸಮೃದ್ದಿಯ ಹಸಿರು ರಾಷ್ಟ್ರವನ್ನಾಗಿಸಬೇಕು ಎಂದರು.
ಇದಕ್ಕೂ ಮುನ್ನ ಶಾಸಕ ಭೀಮಣ್ಣ, ಅರಣ್ಯ ರಕ್ಷಣೆ ಮಾಡುವ ಕುರಿತು ಮಕ್ಕಳೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಂತರ ಗಿಡ ನೆಟ್ಟ ಮಕ್ಕಳು, ಗ್ರಾ.ಪಂ ಸದಸ್ಯರು ಹಾಗೂ ಊರ ನಾಗರೀಕರಿಗೆ ಅರಣ್ಯ ಇಲಾಖೆ ವತಿಯಿಂದ ನೀಡಲಾಗುವ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಡಿಎಫ್‌ಒ ಡಾ. ಜಿ.ಆರ್.ಅಜ್ಜಯ್ಯ, ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ, ಡಿವೈಎಸ್ ಪಿ ಗಣೇಶ ಕೆ.ಎಲ್, ಎಸಿಎಫ್ ರಘು.ಡಿ, ಆರ್‌ಎಫ್‌ಒ ಶಿವಾನಂದ ನಿಂಗಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.